ತುರ್ತುಸ್ಥಿತಿ, ಬ್ಲೂಸ್ಟಾರ್ ಕಾರ್ಯಾಚರಣೆ ಇಂದಿರಾ ಗಾಂಧಿ ಮಾಡಿದ ಎರಡು ತಪ್ಪುಗಳು: ಮಾಜಿ ಕೇಂದ್ರ ಸಚಿವ ನಟವರ್ ಸಿಂಗ್

Update: 2018-09-16 14:09 GMT

ಹೊಸದಿಲ್ಲಿ, ಸೆ.16: 1975ರಲ್ಲಿ ತುರ್ತುಸ್ಥಿತಿ ಘೋಷಣೆ ಮತ್ತು ಬ್ಲೂಸ್ಟಾರ್ ಕಾರ್ಯಾಚರಣೆಗೆ ಅನುಮತಿ ನೀಡಿದ್ದು ಪ್ರಧಾನಿ ಇಂದಿರಾ ಗಾಂಧಿ ಮಾಡಿದ ಎರಡು ತಪ್ಪುಗಳು ಎಂದು ಹಿರಿಯ ರಾಜಕಾರಣಿ ಹಾಗೂ ಮಾಜಿ ಕೇಂದ್ರ ಸಚಿವ ನಟವರ್ ಸಿಂಗ್ ಅಭಿಪ್ರಾಯಿಸಿದ್ದಾರೆ.

ಇದಕ್ಕೆ ಹೊರತಾಗಿ ಇಂದಿರಾ ಗಾಂಧಿ ಓರ್ವ ಪ್ರಭಾವೀ ಪ್ರಧಾನ ಮಂತ್ರಿ ಮತ್ತು ಮಾನವತಾವಾದಿಯಾಗಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. 1966ರಿಂದ 1971ರ ವರೆಗೆ ಇಂದಿರಾ ಗಾಂಧಿಯವರ ಆಡಳಿತ ಸಮಯದಲ್ಲಿ ಆಕೆಯ ಕಚೇರಿಯಲ್ಲಿ ನಟವರ್ ಸಿಂಗ್ ನಾಗರಿಕ ಸೇವಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 80ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಸಿಂಗ್ ರಾಜೀವ್ ಗಾಂಧಿ ಸರಕಾರದಲ್ಲಿ ಸಚಿವರಾಗಿದ್ದರು. ಈ ಉಲ್ಲೇಖವನ್ನು ಸಿಂಗ್ ತಮ್ಮ ನೂತನ ಪುಸ್ತಕ ಟ್ರೆಶರ್ಡ್ ಎಪಿಸ್ಟಲ್ಸ್‌ನಲ್ಲಿ ಮಾಡಿದ್ದಾರೆ.

 ಈ ಪುಸ್ತಕವು ಸಿಂಗ್ ಅವರಿಗೆ ಅವರ ಗೆಳೆಯರು, ಸಹೋದ್ಯೋಗಿಗಳು, ಸಮಕಾಲೀನರು ಬರೆದಿರುವ ಪತ್ರಗಳ ಸಂಗ್ರಹವನ್ನು ಹೊಂದಿದೆ. ಇಂದಿರಾ ಗಾಂಧಿ, ಇ.ಎಂ. ಪಾರ್ಸ್ಟರ್, ಸಿ.ರಾಜಗೋಪಾಲಾಚಾರಿ, ಲಾರ್ಡ್ ವೌಂಟ್‌ಬ್ಯಾಟನ್, ಜವಾಹರ್‌ಲಾಲ್ ನೆಹರೂ ಅವರ ಸಹೋದರಿಯರಾದ ವಿಜಯಲಕ್ಷ್ಮಿ ಪಂಡಿತ್ ಮತ್ತು ಕೃಷ್ಣ ಹುತೀಸಿಂಗ್, ಆರ್.ಕೆ. ನಾರಾಯಣ್, ಹನ್ ಸುಯಿ ಸೇರಿದಂತೆ ಹಲವು ಪ್ರತಿಷ್ಠಿತರು ಸಿಂಗ್‌ಗೆ ಬರೆದಿರುವ ಪತ್ರಗಳನ್ನು ಈ ಪುಸ್ತಕ ಹೊಂದಿದೆ.

ಇಂದಿರಾ ಗಾಂಧಿಯನ್ನು ಓರ್ವ ಗಂಭೀರ, ಕಠಿಣ, ನಿರ್ದಯಿ ವ್ಯಕ್ತಿಯೆಂದೇ ಬಿಂಬಿಸಲಾಗಿದೆ. ಆದರೆ ಅವರ ಸುಂದರ, ಸೂಕ್ಷ್ಮ, ಮಾನವೀಯ ಮುಖದ ಬಗ್ಗೆ ಬಹಳ ಕಡಿಮೆ ತಿಳಿಸಲಾಗಿದೆ ಎಂದು ಸಿಂಗ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News