ದೇಶವನ್ನು ಉಳಿಸಲು ಆರೆಸ್ಸೆಸ್ ನಿಂದ ದೂರ ಉಳಿಯಬೇಕು: ಅಖಿಲೇಶ್ ಯಾದವ್

Update: 2018-09-16 13:37 GMT

ಹೊಸದಿಲ್ಲಿ, ಸೆ.16: ಸಂಘಪರಿವಾರ ಅಥವಾ ಆರೆಸ್ಸೆಸ್ ಜನರನ್ನು ವಿಭಜಿಸುತ್ತಿದ್ದು ದೇಶವನ್ನು ಉಳಿಸಲು ನಾವೆಲ್ಲರೂ ಅದರಿಂದ ದೂರವಿರಬೇಕಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ರವಿವಾರ ತಿಳಿಸಿದ್ದಾರೆ. ಆರೆಸ್ಸೆಸ್ ನಮ್ಮನ್ನು ಧರ್ಮ ಮತ್ತು ಜಾತಿ ಆಧಾರದಲ್ಲಿ ವಿಭಜಿಸುತ್ತದೆ. ಹಾಗಾಗಿ ನಾನು ಅದನ್ನು ವಿರೋಧಿಸುತ್ತೇನೆ ಎಂದು ಅಖಿಲೇಶ್ ತಿಳಿಸಿದ್ದಾರೆ. ಇದೇ ವೇಳೆ, ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಸಂಘಪರಿವಾರದ ಬೃಹತ್ ಸಭೆಯಲ್ಲಿ ಪಾಲ್ಗೊಳ್ಳಲು ಎಸ್‌ಪಿ ನಾಯಕ ನಿರಾಕರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೋಲಲು ಬಿಜೆಪಿಯಷ್ಟೇ ಆರೆಸ್ಸೆಸ್ ಕೂಡಾ ಕಾರಣವಾಗಿದೆ. ಸಂಘಪರಿವಾರ ರಾಜ್ಯದ ಜನರನ್ನು ತಪ್ಪು ಮಾಹಿತಿ ನೀಡಿದ ಪರಿಣಾಮ ಎಸ್‌ಪಿ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿತ್ತು ಎಂದು ಅಖಿಲೇಶ್ ತಿಳಿಸಿದ್ದಾರೆ. ಯುವಕರು ಧರ್ಮ ಮತ್ತು ಜಾತಿಗೆ ಹೊಡೆದಾಡುವಂತೆ ಮಾಡಿದರೆ ಅವರು ಉದ್ಯೋಗ ಮತ್ತು ಆದಾಯವನ್ನು ಕೇಳುವುದಿಲ್ಲ. ಇದೇ ಸಂಘಪರಿವಾರದ ಯೋಜನೆಯಾಗಿದೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ನಮಗೆ ಸಾಧ್ಯವಾದಷ್ಟು ಕಠಿಣ ರೀತಿಯಲ್ಲಿ ಕೋಮುವಾದದ ವಿರುದ್ಧ ಕೆಲಸ ಮಾಡಿದ್ದೆವು ಎಂದು ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಮೂರು ದಿನಗಳ ಬೃಹತ್ ಸಭೆಗೆ ಆರೆಸ್ಸೆಸ್ ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಿದೆ. ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಅಖಿಲೇಶ್, ಸಂಘಪರಿವಾರದ ಕುರಿತು ಸರ್ದಾರ್ ವಲ್ಲಭ ಬಾಯ್ ಪಟೇಲ್ ಬರೆದಿರುವ ಮಾತುಗಳನ್ನು ಓದಿದ ನಂತರ ಅದರಿಂದ ದೂರ ಉಳಿಯುವುದೇ ಉತ್ತಮ ಎಂದು ಅನಿಸಿತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News