ಅಸ್ಸಾಂ: ಮತ್ತೆ ಪ್ರವಾಹದ ಹಾವಳಿ; 1.39 ಲಕ್ಷ ಜನರು ಸಂಕಷ್ಟದಲ್ಲಿ

Update: 2018-09-16 15:15 GMT

 ಗುವಾಹಟಿ,ಸೆ.16: ಅರುಣಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶನಿವಾರ ಬ್ರಹ್ಮಪುತ್ರಾ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು,ಅಸ್ಸಾಮಿನ ಕನಿಷ್ಠ ಆರು ಜಿಲ್ಲೆಗಳಲ್ಲಿ ಪ್ರವಾಹವುಂಟಾಗಿದೆ, 1.39 ಲಕ್ಷಕ್ಕೂ ಅಧಿಕ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಧಿಮಾಜಿ,ಲಖಿಂಪುರ,ಬಿಶ್ವನಾಥ,ಬಾರ್ಪೇಟಾ,ಮಜುಲಿ ಮತ್ತು ದಿಬ್ರುಗಡ ಜಿಲ್ಲೆಗಳ 337 ಗ್ರಾಮಗಳು ನೆರೆಪೀಡಿತವಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯು ತಿಳಿಸಿದೆ. ಆದರೆ ಹೊಸದಾಗಿ ಕಾಣಿಸಿಕೊಂಡಿರುವ ಪ್ರವಾಹದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಹಿಂದೆ ನೆರೆ ಮತ್ತು ಭೂಕುಸಿತದಿಂದಾಗಿ ಒಟ್ಟು 50 ಜನರು ಮೃತರಾಗಿದ್ದರು.

ಜೋರ್ಹಾಟ್‌ನ ನೀಮತಿಘಾಟ್ ಮತ್ತು ಸೋನಿತ್‌ಪುರ ಜಿಲ್ಲೆಯ ತೇಜಪುರದಲ್ಲಿ ಬ್ರಹ್ಮಪುತ್ರಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ 11,243 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಪೈರು ನೀರಿನಲ್ಲಿ ಮುಳುಗಿದ್ದು,12,428 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಿಮಾಜಿ ಜಿಲ್ಲೆ ನೆರೆಯಿಂದ ತೀವ್ರ ಬಾಧಿತವಾಗಿದೆ. ನೀರಿನ ಮಟ್ಟವು ಹೆಚ್ಚುತ್ತ್ಟಿರುವ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ವಿದ್ಯುತ್ ಉತ್ಪಾದನಾ ಸ್ಥಾವರವು ಜಲಾಶಯದಲ್ಲಿನ ನೀರನ್ನು ಅಸ್ಸಾಮಿನ ರಂಗನದಿಗೆ ಬಿಡುಗಡೆಗೊಳಿಸಿರುವುದರಿಂದ ಲಖಿಂಪುರ ಜಿಲ್ಲಾಡಳಿತವು ಕಟ್ಟೆಚ್ಚರವನ್ನು ಘೋಷಿಸಿದೆ.

ಲಖಿಂಪುರ ಮತ್ತು ಧಿಮಾಜಿ ಜಿಲ್ಲೆಗಳಲ್ಲಿ ಒಂಭತ್ತು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು,585 ಜನರು ಆಶ್ರಯ ಪಡೆದುಕೊಂಡಿದ್ದಾರೆ.

ಧಿಮಾಜಿಯ ಪಾನಿಟೋಲಾ ಬ್ಲಾಕ್ ಗಾಂವ್‌ನಲ್ಲಿ ಸುಮಾರು 25 ಮೀ.ಉದ್ದದ ರೈಲ್ವೆಹಳಿಗಳಿಗೆ ಪ್ರವಾಹದಿಂದ ಹಾನಿಯಾಗಿದ್ದು,ರೈಲುಗಳ ಸಂಚಾರಕ್ಕೆ ವ್ಯತ್ಯಯವುಟಾಗಿದೆ. ಪೀಡಿತ ಜಿಲ್ಲೆಗಳಲ್ಲಿ ರಸ್ತೆಗಳು,ಬಿದಿರು ಸೇತುವೆಗಳು ಮತ್ತು ಮೋರಿಗಳಿಗೂ ಪ್ರವಾಹದಿಂದ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News