ತ್ಯಾಜ್ಯಗುಂಡಿಗೆ ಇಳಿದ ಐವರು ಉಸಿರುಗಟ್ಟಿ ಸಾವು

Update: 2018-09-16 16:48 GMT

ರಾಯಪುರ, ಸೆ. 16: ಮನೆಯೊಂದರ ತ್ಯಾಜ್ಯ ಗುಂಡಿ ಸ್ವಚ್ಛಗೊಳಿಸಲು ಇಳಿದ ಐವರು ಉಸಿರುಗಟ್ಟಿ ಮೃತಪಟ್ಟ ಘಟನೆ ಚತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಪಂಡ್ರಿಪಾನಿ ಗ್ರಾಮದಲ್ಲಿ ರವಿವಾರ ಸಂಭವಿಸಿದೆ. 

ಇಲ್ಲಿಂದ 450 ಕಿ. ಮೀ. ದೂರದಲ್ಲಿರುವ ಪಂಡ್ರಿಪಾನಿ ಗ್ರಾಮದಲ್ಲಿ ತ್ಯಾಜ್ಯ ಗುಂಡಿ ಸ್ವಚ್ಚಗೊಳಿಸಲು ಇಬ್ಬರು ಕಾರ್ಮಿಕರು ಇಳಿದರು. ಅನಂತರ ಮತ್ತಿಬ್ಬರು ಇಳಿದರು. ಬಳಿಕ ಮನೆಯ ಮಾಲಕಿ ಕೂಡ ಇಳಿದರು. ಆದರೆ, ಯಾರೂ ಕೂಡ ಮೇಲೆ ಬರಲಿಲ್ಲ. ತ್ಯಾಜ್ಯ ಗುಂಡಿಯಿಂದ ಯಾರೊಬ್ಬರೂ ಮೇಲೆ ಬರದಿರುವ ಬಗ್ಗೆ ಮಗುವೊಂದು ಗ್ರಾಮಸ್ಥರಿಗೆ ತಿಳಿಸಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಐವರನ್ನು ತ್ಯಾಜ್ಯ ಗುಂಡಿಯಿಂದ ಹೊರ ತೆಗೆದು ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರನ್ನು ಸಾವಿತ್ರಿ (45), ಬದು ಟಾಮ್ (60), ಪರಮ್‌ಜೀತ್ ಪೈಕ್ರಾ (19), ರಾಮ್‌ಜೀವನ್ ರಾಮ್ (35), ಈಶ್ವರ್ ಸಾಯಿ (40) ಎಂದು ಗುರುತಿಸಲಾಗಿದೆ. ಐವರು ಉಸಿರುಗಟ್ಟಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದಾಗ್ಯೂ, ಸಾವಿನ ಖಚಿತ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿದು ಬರಲಿದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News