ಬಿಹಾರದ ಬೋಧಗಯಾದಲ್ಲಿ ಸಜೀವ ಬಾಂಬ್ ಪತ್ತೆ, ಬಿಗುಭದ್ರತೆ

Update: 2018-09-16 15:25 GMT

ಪಾಟ್ನಾ,ಸೆ.16: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡವು ಶನಿವಾರ ಬೋಧಗಯಾದ ಮಹಾಬೋಧಿ ಮಂದಿರದ ಕಾಲಚಕ್ರ ಮೈದಾನಲ್ಲಿ ಸಜೀವ್ ಬಾಂಬ್‌ವೊಂದನ್ನು ಪತ್ತೆ ಹಚ್ಚಿದ್ದು.ಇದರೊಂದಿಗೆ ಮಂದಿರವನ್ನು ಸ್ಫೋಟಿಸುವ ಸಂಭಾವ್ಯ ಭಯೋತ್ಪಾದಕ ಸಂಚು ಬಹಿರಂಗಗೊಂಡಿದೆ.

ಶುಕ್ರವಾರ ಎನ್‌ಐಎ ಬಂಧಿಸಿದ್ದ ಶಂಕಿತ ಭಯೋತ್ಪಾದಕ,ಪ.ಬಂಗಾಳದ ಮಾಲ್ಡಾ ನಿವಾಸಿ ದಿಲಾವರ್ ಹುಸೇನ್ ಅಲಿಯಾಸ್ ಕಮರ್ ಎಂಬಾತ ನೀಡಿದ್ದ ಮಾಹಿತಿಗಳ ಆಧಾರದಲ್ಲಿ ಮೈದಾನದ ಬಳಿಯ ಶೌಚಗೃಹದಲ್ಲಿ ಕೈ ಬಾಂಬ್‌ನ್ನು ಪತ್ತೆ ಹಚ್ಚಲಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಎನ್‌ಐಎ ವಕ್ತಾರ ಅಶೋಕ ಮಿತ್ತಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಬಿಹಾರದ ಸಮ್ಮಿಶ್ರ ಸರಕಾರದ ಪಾಲುದಾರ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ಮೂರು ದಿನಗಳ ಹಿಂದೆ ಬೋಧಗಯಾದಲ್ಲಿ ನಡೆದಿದ್ದ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಸುದ್ದಿಯು ಕೋಲಾಹಲವನ್ನು ಸ್ಥಷ್ಟಿಸಿದೆ. ಈ ಬಾಂಬ್‌ನ್ನು ಇತ್ತೀಚಿಗೆ ಇಡಲಾಗಿತ್ತೇ ಅಥವಾ ಮಹಾಬೋಧಿ ಮಂದಿರದಲ್ಲಿ ಮೂರು ಬಾಂಬ್‌ಗಳು ಪತ್ತೆಯಾಗಿದ್ದ ಜನವರಿಯಲ್ಲಿಯೇ ಈ ಕೆಲಸ ನಡೆದಿತ್ತೇ ಎನ್ನುವುದನ್ನು ಎನ್‌ಐಎ ಮತ್ತು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

 ಜನವರಿಯಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲಾಯಿಲಾಮಾ ಮತ್ತು ಅವರ ಸಾವಿರಾರು ಅನುಯಾಯಿಗಳು ಸಮ್ಮೇಳನವೊಂದರಲ್ಲಿ ಭಾಗಿಯಾಗಲು ನಗರದಲ್ಲಿದ್ದ ಸಂದರ್ಭ ಕಾಲಚಕ್ರ ಮೈದಾನದ ಬಳಿ ಕೆಲವು ಅಲ್ಪಶಕ್ತಿಯ ಸ್ಫೋಟಕಗಳು ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಳಿಕ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಏಳು ಜನರನ್ನು ಬಂಧಿಸಿತ್ತು.

ಇದೀಗ ಮತ್ತೆ ಬಾಂಬ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೋಧಗಯಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

2013,ಜುಲೈ 7ರಂದು ಮಹಾಬೋಧಿ ಮಂದಿರ ಮತ್ತು ಸುತ್ತುಮುತ್ತಲು ಸರಣಿ ಬಾಂಬ್ ಸ್ಪೋಟಗಳು ಸಂಭವಿಸಿ ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿದಂತೆ ಐವರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News