ಗೋರಕ್ಷಣೆ ಹೆಸರಿನ ಗುಂಪು ಹತ್ಯೆ ಪ್ರಜಾಪ್ರಭುತ್ವಕ್ಕೆ ಕಳಂಕ: ಮಾಯಾವತಿ

Update: 2018-09-16 15:28 GMT

ಲಕ್ನೋ,ಸೆ.16: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಗುಂಪುಗಳು ಅಮಾಯಕರನ್ನು ಥಳಿಸಿ ಹತ್ಯೆಗೈಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ರವಿವಾರ ಇಲ್ಲಿ ಬಣ್ಣಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು,ಈ ವಿಷಯದಲ್ಲಿ ಬಿಜೆಪಿ ಸರಕಾರಗಳು ದಿವ್ಯ ನಿರ್ಲಕ್ಷವನ್ನು ವಹಿಸಿವೆೆ ಎಂದು ಆರೋಪಿಸಿದರು.

  ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ವಿಶಾಲವಾದ ಸರಕಾರಿ ಬಂಗಲೆಯನ್ನು ತೊರೆದು ನೂತನ ನಿವಾಸಕ್ಕೆ ಸ್ಥಳಾಂತರಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದಾಗಿನಿಂದ ದಲಿತರು,ಆದಿವಾಸಿಗಳು,ಹಿಂದುಳಿದವರು,ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಇಂತಹ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಇದು ಸಂವಿಧಾನದ ವಿರುದ್ಧ ಹೋಗುವ ಮತ್ತು ಸಂವಿಧಾನದೊಡನೆ ಮಲತಾಯಿ ಧೋರಣೆಯನ್ನು ಕಾಯ್ದುಕೊಳ್ಳುವ ಬಿಜೆಪಿಯ ಉದ್ದೇಶದ ಫಲಶೃತಿಯಾಗಿದೆ. ಇದು ಬಿಜೆಪಿಯ ಮೂಲನೀತಿಯಾಗಿದ್ದು,ಅಧಿಕಾರಕ್ಕೆ ಬಂದ ಬಳಿಕ ಹೆಚ್ಚು ವಿಸ್ತ್ರತಗೊಂಡಿದೆ ಎಂದರು.

  ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿವಿಧ ವಿಷಯಾಂತರ ತಂತ್ರಗಳಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು,ಅದು ವಿವಿಧ ಆಮಿಷಗಳನ್ನು ಪ್ರಕಟಿಸುತ್ತಿದೆ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನದ ಲಾಭವನ್ನು ಪಡೆದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ವಾಜಪೇಯಿಯವರು ಬದುಕಿದ್ದಾಗ ಪಕ್ಷವು ಅವರ ಹೆಜ್ಜೆಗಳನ್ನೆಂದೂ ಅನುಸರಿಸಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News