ಉತ್ತರ ಪ್ರದೇಶ: ಕುಂಭಮೇಳಕ್ಕಾಗಿ ನೆಹರೂ ಪ್ರತಿಮೆ ಎತ್ತಂಗಡಿ

Update: 2018-09-16 15:57 GMT

ಲಕ್ನೋ,ಸೆ.16: ಇಲ್ಲಿಯ ಬಾಲ್ಸನ್ ಚೌರಾಹಾದಲ್ಲಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರತಿಮೆಯನ್ನು ಎತ್ತಂಗಡಿ ಮಾಡಲಾಗಿದ್ದು,ಇದರಿಂದ ಕುಪಿತ ಕಾಂಗ್ರೆಸ್ ಮತ್ತು ಎಸ್‌ಪಿ ನಾಯಕರು ಪ್ರತಿಭಟನೆಯನ್ನು ನಡೆಸಿದರು.

ಇದು ರಾಜ್ಯ ಸರಕಾರದ ದುರುದ್ದೇಶಪೂರ್ವಕ ಕೃತ್ಯವಾಗಿದೆ ಮತ್ತು ನೆಹರು ಅವರ ಸಿದ್ಧಾಂತವನ್ನು ದೂರವಿರಿಸುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು. ಇದು ಭಾರತದ ಮೊದಲ ಪ್ರಧಾನಿಗೆ ಮಾಡಿರುವ ಅವಮಾನವಾಗಿದೆ ಎಂದು ಅವರು ಬಣ್ಣಿಸಿದರು.

2019,ಜನವರಿಯಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ನಗರದ ಸುಂದರೀಕರಣ ಕಾರ್ಯದ ಅಂಗವಾಗಿ ರಸ್ತೆಯನ್ನು ಅಗಲಗೊಳಿಸಲು ಮತ್ತು ಸುಗಮ ಸಂಚಾರ ವ್ಯವಸ್ಥೆಗಾಗಿ ಪ್ರತಿಮೆಯನ್ನು ತೆಗೆಯಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಚೌರಾಹಾದಲ್ಲಿ ನೆಹರು,ದೀನದಯಾಳ ಉಪಾಧ್ಯಾಯ ಮತ್ತು ಎಚ್.ಎನ್.ಬಹುಗುಣ ಅವರ ಪ್ರತಿಮೆಗಳಿದ್ದು,ಕೇವಲ ನೆಹರು ಅವರ ಪ್ರತಿಮೆಯನ್ನು ಮಾತ್ರ ಎತ್ತಂಗಡಿ ಮಾಡಲಾಗಿದೆ ಎಂಬ ಪ್ರತಿಪಕ್ಷದ ಆರೋಪಕ್ಕೆ ಉತ್ತರಿಸಿರುವ ರಾಜ್ಯ ಸರಕಾರವು,ರಸ್ತೆಯನ್ನು ಅಗಲೀಕರಿಸುವ ಕಾರ್ಯದಲ್ಲಿ ನೆಹರು ಪ್ರತಿಮೆ ಮಾತ್ರ ಅಡ್ಡಿಯಾಗುತ್ತಿತ್ತು,ಹೀಗಾಗಿ ಅದನ್ನು ಅದೇ ಪ್ರದೇಶದಲ್ಲಿ ಸುಮಾರು 10 ಚದುರಡಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ಪ್ರಧಾನಿ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿ ರಾಜೀವ ಗಾಂಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಅಲಹಾಬಾದ್‌ನಲ್ಲಿ ನೆಹರು ಪ್ರತಿಮೆಯನ್ನು ಎತ್ತಂಗಡಿ ಮಾಡಲಾಗಿದೆ. ಬಿಜೆಪಿಯ ದುರಂಹಕಾರವನ್ನು ಇತಿಹಾಸವು ನೆನಪಿನಲ್ಲಿಟ್ಟುಕೊಳ್ಳಲಿದೆ. ನಾವು ಇದನ್ನು ಮರೆಯುವುದಿಲ್ಲ. ಇದು ನಮ್ಮ ನೋವು,ಹಾಗೆಯೇ ನಮ್ಮ ಸ್ಫೂರ್ತಿಯೂ ಆಗಲಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News