ಪರಿಷ್ಕೃತ ಜನಧನ್ ಯೋಜನೆಗೆ 20 ಲಕ್ಷ ಜನರ ಸೇರ್ಪಡೆ

Update: 2018-09-16 16:41 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.16: ಪರಿಷ್ಕೃತ ಪ್ರಧಾನ ಮಂತ್ರಿ ಜನಧನ್ ಯೋಜನೆಗೆ 20 ಲಕ್ಷ ಜನರು ಸೇರ್ಪಡೆಗೊಂಡಿದ್ದು,ಇದರೊಂದಿಗೆ ಸೆ.5ಕ್ಕೆ ಇದ್ದಂತೆ ಈ ಯೋಜನೆಯಡಿ ಖಾತೆದಾರರ ಒಟ್ಟು ಸಂಖ್ಯೆ 32.61 ಕೋಟಿಗೇರಿದೆ.

ಸರಕಾರವು ಈ ತಿಂಗಳ ಪೂರ್ವಾರ್ಧದಲ್ಲಿ ಹೆಚ್ಚಿನ ವಿಮಾ ರಕ್ಷಣೆ ಮತ್ತು ದ್ವಿಗುಣ ಓವರ್‌ಡ್ರಾಫ್ಟ್(ಓ.ಡಿ.) ಸೌಲಭ್ಯದೊಂದಿಗೆ ಮುಕ್ತ ಯೋಜನೆಯಾಗಿ ಜನಧನ ಯೋಜನೆಯನ್ನು ಮರುಜಾರಿಗೊಳಿಸಿತ್ತು.

ಆ.14ರಂದು ಕೊನೆಗೊಂಡಿದ್ದ ನಾಲ್ಕು ವರ್ಷಗಳ ಅವಧಿಯನ್ನು ಮೀರಿ ಯೋಜನೆಯನ್ನು ಮುಂದುವರಿಸಲು ಸರಕಾರವು ನಿರ್ಧರಿಸಿದ್ದು,ಆ.15 ಮತ್ತು ಸೆ.5ರ ನಡುವಿನ ಅವಧಿಯಲ್ಲಿ 32.61 ಕೋ.ಜನಧನ ಖಾತೆಗಳ ಠೇವಣಿಗಳಲ್ಲಿ 1,266.43 ಕೋ.ರೂ.ಗಳಷ್ಟು ಏರಿಕೆಯಾಗಿದೆ. ಸೆ.5ಕ್ಕೆ ಇದ್ದಂತೆ ಜನಧನ ಖಾತೆಗಳಲ್ಲಿರುವ ಠೇವಣಿಗಳ ಮೊತ್ತ 82,490.98 ಕೋ.ರೂ.ಗಳಾಗಿವೆ ಎಂದು ವಿತ್ತ ಸಚಿವಾಲಯದ ವರದಿಯು ತಿಳಿಸಿದೆ.

ಪರಿಷ್ಕೃತ ಯೋಜನೆಯಡಿ ಆ.28ರ ಬಳಿಕ ತೆರೆಯಲಾದ ನೂತನ ಜನಧನ ಖಾತೆಗಳಿಗೆ ಹೊಸ ರುಪೇ ಕಾರ್ಡ್ ಹೊಂದಿರುವವರಿಗೆ ಅಪಘಾತ ವಿಮೆ ರಕ್ಷಣೆಯನ್ನು ಒಂದು ಲ.ರೂ.ನಿಂದ ಎರಡು ಲ.ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ ಹಾಲಿ 5,000 ರೂ.ಇದ್ದ ಓ.ಡಿ.ಸೌಲಭ್ಯವನ್ನು 10,000 ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ 2,000 ರೂ.ವರೆಗಿನ ಓ.ಡಿ. ಸಾಲಕ್ಕೆ ಯಾವದೇ ಷರತ್ತನ್ನು ವಿಧಿಸಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News