ಏಶ್ಯಕಪ್: ಪಾಕಿಸ್ತಾನಕ್ಕೆ ಸುಲಭ ಜಯ

Update: 2018-09-16 17:18 GMT

ದುಬೈ, ಸೆ.16: ಏಶ್ಯಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹಾಂಕಾಂಗ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ. ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.

ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 117 ರನ್ ಗುರಿ ಪಡೆದ ಪಾಕಿಸ್ತಾನ 23.4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 120 ರನ್ ಗಳಿಸಿತು. ಆರಂಭಿಕ ಆಟಗಾರ ಇಮಾಮ್-ವುಲ್-ಹಕ್ ಔಟಾಗದೆ 50 ರನ್ ಗಳಿಸಿದರು. ಬಾಬರ್ ಆಝಂ(33) ಹಾಗೂ ಫಖರ್ ಝಮಾನ್(24) ಗೆಲುವಿಗೆ ಕಾಣಿಕೆ ನೀಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಝಮಾನ್ ಹಾಗೂ ಹಕ್ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 41 ರನ್ ಸೇರಿಸಿದರು. ಈ ಜೋಡಿಯನ್ನು ಎಹ್ಸಾನ್ ಖಾನ್ ಬೇರ್ಪಡಿಸಿದರು. ಹಕ್‌ರೊಂದಿಗೆ ಕೈಜೋಡಿಸಿದ ಆಝಂ 2ನೇ ವಿಕೆಟ್‌ಗೆ 52 ರನ್ ಸೇರಿಸಿ ಪಾಕ್‌ಗೆ ಸುಲಭ ಗೆಲುವು ಖಚಿತಪಡಿಸಿದರು. 36 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದ ಆಝಂಗೆ ಎಹ್ಸಾನ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 27 ರನ್ ಸೇರಿಸಿದ ಹಕ್ ಹಾಗೂ ಶುಐಬ್ ಮಲಿಕ್(9)ತಂಡಕ್ಕೆ ಇನ್ನೂ 158 ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದರು.

23.3ನೇ ಓವರ್‌ನಲ್ಲಿ ಏಝಾಝ್ ಖಾನ್ ಎಸೆತದಲ್ಲಿ ಬೌಂಡರಿ ಬಾರಿಸಿದ ಹಕ್ 69 ಎಸೆತಗಳಲ್ಲಿ  ಅರ್ಧಶತಕ ದಾಖಲಿಸಿದರು. ಇದರಲ್ಲಿ 3 ಬೌಂಡರಿ, 1 ಸಿಕ್ಸರ್ ಇದೆ.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಹಾಂಕಾಂಗ್ ತಂಡ ಉಸ್ಮಾನ್ ಖಾನ್(19ಕ್ಕೆ 3), ಹಸನ್ ಅಲಿ(19ಕ್ಕೆ 2) ಹಾಗೂ ಶಾದಾಬ್ ಖಾನ್(31ಕ್ಕೆ2) ದಾಳಿಗೆ ಕಂಗಾಲಾಗಿ 37.1 ಓವರ್‌ಗಳಲ್ಲಿ 116 ರನ್ ಗಳಿಸಿ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News