ಮೂರನೇ ಏಕದಿನ: ಭಾರತಕ್ಕೆ ಸೋಲು

Update: 2018-09-16 18:25 GMT

ಕೊಲಂಬೊ, ಸೆ.16: ಮೂರನೇ ಹಾಗೂ ಕೊನೆಯ ಮಹಿಳಾ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಜಯ ಸಾಧಿಸಿದ ಆತಿಥೇಯ ಶ್ರೀಲಂಕಾ ಆಟಗಾರ್ತಿಯರು ಭಾರತಕ್ಕೆ ಶಾಕ್ ನೀಡಿದ್ದಾರೆ.

ಶ್ರೀಲಂಕಾದ ಗೆಲುವಿನೊಂದಿಗೆ ಜೀವನಶ್ರೇಷ್ಠ ಇನಿಂಗ್ಸ್ ಆಡಿದ ನಾಯಕಿ ಮಿಥಾಲಿ ರಾಜ್(ಔಟಾಗದೆ 125)ಶ್ರಮ ವ್ಯರ್ಥವಾಯಿತು.

 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಮೂರನೇ ಪಂದ್ಯದಲ್ಲಿ 5 ವಿಕೆಟ್‌ಗೆ 253 ರನ್ ಗಳಿಸಿದ್ದರೂ ಗೆಲುವು ಕೈಗೆಟುಕಲಿಲ್ಲ. ರಾಜ್ ಹಾಗೂ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ(51)2ನೇ ವಿಕೆಟ್‌ಗೆ 102 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು.

143 ಎಸೆತಗಳನ್ನು ಎದುರಿಸಿದ ಮಿಥಾಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ ಏಳನೇ ಶತಕ ಸಿಡಿಸಿದರು. 14 ತಿಂಗಳ ಬಳಿಕ ಶತಕ ಸಿಡಿಸಿದ ಮಿಥಾಲಿ ರನ್ ಬರ ನೀಗಿಸಿಕೊಂಡರು.

ಗೆಲ್ಲಲು 254 ರನ್ ಗುರಿ ಪಡೆದ ಶ್ರೀಲಂಕಾ 49.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶ್ರೀಲಂಕಾದ ನಾಯಕಿ ಚಾಮರಿ ಅಟ್ಟಪಟ್ಟು ಶತಕ(115, 133 ಎಸೆತ, 13 ಬೌಂಡರಿ, 4 ಸಿಕ್ಸರ್)ಸಿಡಿಸಿದ್ದಲ್ಲದೆ ಆರಂಭಿಕ ಆಟಗಾರ್ತಿ ಹಸಿನಿ ಪೆರೇರ(45) ಅವರೊಂದಿಗೆ ಮೊದಲ ವಿಕೆಟ್‌ಗೆ 101 ರನ್ ಜೊತೆಯಾಟ ನಡೆಸಿ ತಂಡದ ಚೇಸಿಂಗ್‌ಗೆ ಭದ್ರಬುನಾದಿ ಹಾಕಿದರು.

ಈ ಇಬ್ಬರು ಆಟಗಾರ್ತಿಯರು ಔಟಾದ ಬಳಿಕ ಭಾರತದ ಬೌಲರ್‌ಗಳು ತಿರುಗೇಟು ನೀಡಿದರು. ಆದರೆ, ಕೆಳ ಕ್ರಮಾಂಕದಲ್ಲಿ ವೀರಕ್ಕೋಡಿ(ಔಡಾಗದೆ 14) ಹಾಗೂ ಕವಿಶಾ ದಿಲ್‌ಹರಿ(ಔಟಾಗದೆ 12)ದಿಟ್ಟ ಹೋರಾಟ ನೀಡಿ ತಂಡಕ್ಕೆ ಗೆಲುವು ತಂದರು.

ಲಂಕಾದ ಗೆಲುವಿಗೆ ಕೊನೆಯ ಓವರ್‌ನಲ್ಲಿ 6 ರನ್ ಅಗತ್ಯವಿತ್ತು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕವಿಶಾ ಕೊನೆಯ ಓವರ್‌ನ 5ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ತಂಡಕ್ಕೆ ರೋಚಕ ಜಯ ತಂದರು. ಜುಲನ್ ಗೋಸ್ವಾಮಿ ಹಾಗೂ ಮಾನ್ಸಿ ಜೋಶಿ ತಲಾ ಎರಡು ವಿಕೆಟ್ ಪಡೆದರು. ಉಭಯ ತಂಡಗಳ ನಡುವೆ 5 ಪಂದ್ಯಗಳ ಟ್ವೆಂಟಿ-20 ಸರಣಿಯು ಬುಧವಾರದಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News