ಸಂಸದ ನಳಿನ್-ಶೋಭಾರಿಂದ ದ.ಕ. ಜಿಲ್ಲೆಗೆ ಕೆಟ್ಟ ಹೆಸರು: ಪ್ರೊ.ರಾಧಾಕೃಷ್ಣ ಆರೋಪ

Update: 2018-09-17 08:38 GMT

ಮಂಗಳೂರು, ಸೆ.17: ಸೌಹಾರ್ದದ ನೆಲೆಬೀಡಾಗಿದ್ದ ದ.ಕ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಹೆಚ್ಚುತ್ತಿದೆ. ಇದಕ್ಕೆ ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆಯೇ ಕಾರಣ. ಇವರಿಬ್ಬರಿಂದಲೇ ದ.ಕ. ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ. ರಾಧಾಕೃಷ್ಣ ಆರೋಪಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ದ.ಕ.ಜಿಲ್ಲೆಯ ಹಿಂದೂ-ಮುಸ್ಲಿಮರ ಮಧ್ಯೆ ಹಿಂದೆ ಅನ್ಯೋನ್ಯತೆ ಇತ್ತು. ರಾಜಕೀಯ ಕಾರಣಕ್ಕಾಗಿ ಅದನ್ನು ಹಾಳುಗೆಡಹುವ ಪ್ರಯತ್ನ ನಡೆಯಿತು. ಸಂಸದರಾದ ನಳಿನ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಯುವಕರಲ್ಲಿ ಮತೀಯ ಭಾವನೆ ಬಿತ್ತಿ ಮತ್ತು ಪ್ರಚೋದಿಸಿ ಸಾಮರಸ್ಯ ಹಾಳುಗೆಡಹುತ್ತಿದ್ದಾರೆ ಎಂದರು.

ಸಬ್‌ಕಾ ವಿಕಾಸ್, ಅಚ್ಛೇ ದಿನ್ ಇತ್ಯಾದಿ 37 ಘೋಷಣೆಗಳ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಜನರನ್ನು ಮೋಸಗೊಳಿಸಿದ್ದಾರೆ. ಯಾವ ಘೋಷಣೆಯನ್ನೂ ಕೂಡಾ ಯಥಾವತ್ತಾಗಿ ಅನುಷ್ಠಾನಗೊಳಿಸಿಲ್ಲ. ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ತಡೆಗಟ್ಟಲು ಮೋದಿ ಸರಕಾರಕ್ಕೆ ಆಗುತ್ತಿಲ್ಲ. ಕೇಂದ್ರದ ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಸುಳ್ಳು ಹೇಳುತ್ತಿದ್ದಾರೆ. ತಾನು ದೇಶ ಬಿಡುವಾಗ ಸಚಿವ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ ಎಂದು ವಿಜಯ ಮಲ್ಯ ಹೇಳುತ್ತಿದ್ದಾರೆ. ಇಬ್ಬರು ರಾಜಕಾರಣಿಗಳು ಪರಸ್ಪರ ಮುಖಾಮುಖಿಯಾದಾಗ ರಾಜಕಾರಣದ ಬಗ್ಗೆ ಮಾತನಾಡುತ್ತಾರೆಯೇ ವಿನಃ ಮನೆಯ ವಿಷಯಗಳನ್ನಲ್ಲ. ಅದೇ ರೀತಿ ಲಲಿತ್ ಮೋದಿ ಕೂಡಾ ತನಗೆ ಸಚಿವ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಗ್ಗೆ ಮೋದಿ ಭಕ್ತರ ಪ್ರತಿಕ್ರಿಯೆ ಏನು ಎಂದು ಪ್ರೊ. ರಾಧಾಕೃಷ್ಣ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಇಬ್ರಾಹೀಂ ಕೋಡಿಜಾಲ್, ಕಾರ್ಪೊರೇಟರ್ ಎ.ಸಿ.ವಿನಯರಾಜ್, ಡಿಸಿಸಿ ಕಾರ್ಯದರ್ಶಿಗಳಾದ ಭಾರತಿ, ನೀರಜ್‌ಪಾಲ್, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News