ಜೋಯಾಲುಕ್ಕಾಸ್‌ನಿಂದ ಕೇರಳ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ

Update: 2018-09-18 05:17 GMT

 

ಜಾಯ್ ಆಲುಕ್ಕಾಸ್


ಮಂಗಳೂರು, ಸೆ.17: ವಿಶ್ವದ ಪ್ರಮುಖ ಆಭರಣಗಳ ಸಂಸ್ಥೆಗಳಲ್ಲಿ ಒಂದಾಗಿರುವ ಜಾಯ್ ಅಲುಕಾಸ್ ಗ್ರೂಪ್ ಇದೀಗ ಕೇರಳದ ನೆರೆ ಪೀಡಿತರಿಗೆ ನೆರವಿನ ಹಸ್ತ ನೀಡಲು ಮುಂದಾಗಿದೆ.

ಕೇರಳದಲ್ಲಿ ನೆರೆ ಪೀಡಿತರಿಗೆ 250 ಮನೆಗಳನ್ನು ‘ಜಾಯ್ ಹೋಮ್’ ಹೆಸರಿನಲ್ಲಿ ನಿರ್ಮಿಸುವ ಮೂಲಕ ನೆರೆ ಪೀಡಿತರ ಬಾಳಿನಲ್ಲಿ ನೆಮ್ಮದಿಯನ್ನು ತುಂಬಲು ಜಾಯ್ ಅಲುಕಾಸ್ ಗ್ರೂಪ್ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಸಂಸ್ಥೆಯು 15 ಕೋಟಿ ರೂ.ಗಳನ್ನು ವ್ಯಯಿಸಲು ಮುಂದಾಗಿದೆ. ಮನೆಯೊಂದು ತಲಾ 6 ಲಕ್ಷ ರೂ. ರೂ.ನಲ್ಲಿ ನಿರ್ಮಾಣವಾಗಲಿದೆ.  ‘‘ಮನೆಯನ್ನು ಪಡೆದುಕೊಂಡವರ ಬಾಳಿನಲ್ಲಿ ಸಂತಸವನ್ನು ತುಂಬುವುದು ಈ ಮನೆ ನಿರ್ಮಾಣದ ಉದ್ದೇಶ’’ ಎಂದು ಜಾಯ್ ಅಲುಕಾಸ್ ಗ್ರೂಪ್‌ನ ಅಧ್ಯಕ್ಷರಾದ ಜಾಯ್ ಅಲುಕಾಸ್ ಹಾಗೂ ಜಾಯ್ ಅಲುಕಾಸ್ ಫೌಂಡೇಶನ್‌ನ ನಿರ್ದೇಶಕರಾಗಿರುವ ಜಾಲಿ ಜಾಯ್ ಅಭಿಪ್ರಾಯಿಸಿದ್ದಾರೆ.

600 ಚದರ ಅಡಿ ವಿಸ್ತೀಣದಲ್ಲಿ ಎರಡು ಬೆಡ್‌ರೂಂ, ಲಿವಿಂಗ್ ಕಂ ಡೈನಿಂಗ್ ರೂಂ, ಕಿಚನ್ ಮತ್ತು ಸಿಟ್‌ಔಟ್‌ನ್ನು ಈ ಮನೆ ಒಳಗೊಂಡಿದ್ದು, ಕಾಂಕ್ರೀಟ್ ಮೇಲ್ಛಾವಣಿಯನ್ನು ಹೊಂದಿರುತ್ತದೆ.

ನೆರೆಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ತಜ್ಞ ವಾಸ್ತುಶಿಲ್ಪಿಗಳಿಂದ ಯೋಜನಾ ವರದಿಯ ಆಧಾರದ ಮೇರೆಗೆ ಅಲ್ಲಿನ ವಾತಾವರಣಕ್ಕೆ ಪೂರಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ನೆರೆಯಿಂದ ಹಾನಿಗೊಳಗಾಗಿರುವ ಕೇರಳವನ್ನು ಪುನರ್ ನಿರ್ಮಾಣ ಮಾಡುವ ಸರಕಾರದ ಕಾರ್ಯಕ್ಕೆ ಬೆಂಬಲ ನೀಡುವ ಮೂಲಕ ತೊಂದರೆಗೊಳಗಾಗಿರುವ ಜನರಿಗೆ ಬದುಕಲು ನೆರವಾಗುವ ನಿಟ್ಟಿನಲ್ಲಿ ಜಾಯ್ ಅಲುಕಾಸ್ ಗ್ರೂಪ್ ಈ ಕಾರ್ಯಕ್ಕೆ ಮುಂದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಯೋಜನೆಯ ವಿವರವನ್ನು ಕೇರಳದ ಮುಖ್ಯಮಂತ್ರಿಗೆ ಸಲ್ಲಿಕೆ ಮಾಡಲಾಗಿದ್ದು, ಪ್ರತಿ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತ ಮಂಡಳಿ ನೆರವಿನೊಂದಿಗೆ ಮನೆ ನಿರ್ಮಾಣ ಕಾರ್ಯ ನಡೆಯಲಿದೆ. ನೆರೆ ಹಾಗೂ ಭೂಕುಸಿತದಿಂದ ಮನೆಯನ್ನು ಕಳೆದುಕೊಂಡವರು ತಮ್ಮ ಸಮೀಪದ ಜಾಯ್ ಅಲುಕಾಸ್ ಗುಂಪಿನ ಮಳಿಗೆಯಲ್ಲಿ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು.ಈ ಅರ್ಜಿಗಳನ್ನು ಜಾಯ್ ಅಲುಕಾಸ್ ಫೌಂಡೇಶ್‌ನಿಂದ ರಚಿಸಲಾಗಿರುವ ಸಮಿತಿಯು ಸ್ಥಳೀಯಾಡಳಿತದ ಜತೆ ಸಮಾಲೋಚನೆ ನಡೆಸಿ ಕೂಲಂಕುಷವಾಗಿ ಅಧ್ಯಯನ ನಡೆಸಲಿದೆ. ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿ, ಸರಕಾರದ ಎಲ್ಲಾ ಅಗತ್ಯ ಕ್ರಮಗಳ ಬಳಿಕ ಮನೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ನಿರ್ಮಾಣ ಕಾರ್ಯವನ್ನು ಶೀಘ್ರ ಮುಗಿಸಿ ಆಯ್ದ ಅರ್ಹರಿಗೆ ಮನೆಯನ್ನು ಹಸ್ತಾಂತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಾಯ್ ಅಲುಕಾಸ್ ಫೌಂಡೇಶನ್, ತ್ರಿಶೂರು ಇಲ್ಲಿನ ದೂರವಾಣಿ ಸಂಖ್ಯೆ 0487 2329222ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News