ಪ್ರಜ್ಞಾವಂತ ವಿದ್ಯಾರ್ಥಿಗಳಿಂದ ಪ್ರಜಾಪ್ರಭುತ್ವ ಜೀವಂತ: ಕೋಟ

Update: 2018-09-17 12:53 GMT

ಉಡುಪಿ, ಸೆ.17: ರಾಜ್ಯದಲ್ಲಿ ವರ್ಷಕ್ಕೆ ಸುಮಾರು ಒಂಭತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರಬರುತ್ತಿದ್ದು, ಅವರಲ್ಲಿ ಶೇ.1ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವ ಪ್ರಯತ್ನ ಮತ್ತು ಪರಿಶ್ರಮದಿಂದ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಬಿಕಾಂ ಮತ್ತು ಬಿಎ ಪದವಿ ತರಗತಿಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.75ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದು ತೇರ್ಗಡೆಯಾದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸೆ.15ರಂದು ಕಾಲೇಜಿನಲ್ಲಿ ಸನ್ಮಾನಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳು ಜೀವನ ರೂಪಿಸಲು ಬೇಕಾದ ಸಹಾಯ ಸಲಹೆಗಳನ್ನು ನೀಡಲು ಕಾಲೇಜು ಉತ್ತಮ ಮಾಧ್ಯಮವಾಗಿದ್ದು, ಜೀವನದ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಲ್ಲಿಯವರೆಗೆ ಪ್ರಜ್ಞಾವಂತ ವಿದ್ಯಾರ್ಥಿ ಗಳು ಇರುತ್ತಾರೋ ಅಲ್ಲಿಯವರೆಗೆ ನಮ್ಮ ಪ್ರಜಾಪ್ರಭುತ್ವ ಜೀವಂತವಾಗಿರಲು ಸಾಧ್ಯ ಎಂದರು.

 ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು, ಉಪ ಪ್ರಾಂಶುಪಾಲೆ ಆಶಾ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರವಿರಾಜ್ ಹೆಚ್., ಅಧ್ಯಕ್ಷ ಮನೋಹರ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು. ಜಾವೇದ್ ವಂದಿಸಿ ದರು. ರಾಘವೇಂದ್ರ ಜಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News