ಉರ್ವ ಮಾರ್ಕೆಟ್ ಕಾಮಗಾರಿ ತಿಂಗಳೊಳಗೆ ಪೂರ್ಣ: ಸಚಿವ ಖಾದರ್

Update: 2018-09-17 16:36 GMT

ಮಂಗಳೂರು, ಸೆ.17: ಉರ್ವ ಮಾರ್ಕೆಟ್‌ನಲ್ಲಿ 12.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನೊಂದು ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸೋಮವಾರ ಮಾರುಕಟ್ಟೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳ ಅಭಿಪ್ರಾಯ ಸಂಗ್ರಹಿಸಿ, ಅವರ ಬೇಡಿಕೆಯಂತೆ ಮಾರುಕಟ್ಟೆಯಲ್ಲಿ ಹಲವು ಮಾರ್ಪಾಡುಗಳನ್ನು ನಡೆಸಲಾಗುವುದು. ಹೆಚ್ಚುವರಿ ಸ್ಟಾಲ್‌ಗಳನ್ನು ನಿರ್ಮಾಣ ಮಾಡಲು 2ನೇ ಹಂತದ ಯೋಜನೆಗೆ ಆದೇಶವನ್ನೂ ಮಾಡಲಾಗಿದೆ ಎಂದ ಸಚಿವ ಖಾದರ್, ಕಾಮಗಾರಿ ಪೂರ್ತಿಯಾದ ಬಳಿಕ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.

ವಿವಿಧ ಕಡೆ ಮಾರುಕಟ್ಟೆ: ಕದ್ರಿಯಲ್ಲಿ 12 ಕೋ.ರೂ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿದೆ. ಅದರ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಕಂಕನಾಡಿ ಮಾರುಕಟ್ಟೆಗೆ 45 ಕೋ.ರೂ. ಪ್ರಸ್ತಾವನೆಯು ಹಣಕಾಸು ಇಲಾಖೆಯ ಒಪ್ಪಿಗೆಗೆ ಹೋಗಿದೆ. ಉರ್ವ ಸ್ಟೋರ್‌ನಲ್ಲೂ ನೂತನ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಇದರ ಪ್ರಸ್ತಾವ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿದೆ. ಅಳಕೆಯಲ್ಲಿ 2 ಕೋ.ರೂ. ವೆಚ್ಚದ ಮಾರುಕಟ್ಟೆ ಕಾಮಗಾರಿ ಕೆಲಸ ನಡೆಯುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವಾಗ ಮುಂದಿನ 30 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ನಿರ್ಮಿಸಲಾಗುತ್ತಿದೆ. ಶಾಶ್ವತವಾದ, ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಖಾದರ್ ನುಡಿದರು.

ಮೀನುಗಾರ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ: ಕಾಮಗಾರಿ ಪರಿಶೀಲನೆ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಮೀನುಗಾರ ಮಹಿಳೆಯರು ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಮೀನು ಮಾರುಕಟ್ಟೆಯಲ್ಲಿ ಗ್ರಾನೈಟ್ ಹಾಸಲಾಗಿದ್ದು, ನುಣುಪು ಮೇಲ್ಪದರದಿಂದಾಗಿ ಮುಂದೆ ಸಮಸ್ಯೆ ಯಾಗಲಿದೆ. ಇಲ್ಲಿ ಗಾಳಿ ಬೆಳಕು ಸರಿಯಾಗಿ ಬೀಳುವಂತೆ ಕಿಟಕಿಗಳನ್ನು ದೊಡ್ಡ ಗಾತ್ರದಲ್ಲಿ ಕಟ್ಟಬೇಕು. ಶೌಚಾಲಯ, ಬಾತ್‌ರೂಮ್ ಸಹಿತ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಖಾದರ್, ಮೀನು ಮಾರುಕಟ್ಟೆಯ ಮೇಲ್ಪದರವನ್ನು ಗಡಸುಗೊಳಿಸುವಂತೆ ಮತ್ತು ವಿಶ್ರಾಂತಿ ಕೊಠಡಿಯನ್ನು ನಿರ್ಮಿಸುವಂತೆಯೂ ಸೂಚಿಸಿದರು.

ಪ್ರಸ್ತುತ ಉರ್ವ ಮಾರ್ಕೆಟ್‌ನಲ್ಲಿ 36 ಮೀನುಗಾರ ಮಹಿಳೆಯರಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಇಲ್ಲಿ ವ್ಯಾಪಾರ ಮಾಡಬಹುದಾಗಿದ್ದರಿಂದ ಮಾರುಕಟ್ಟೆಯನ್ನು ವಿಸ್ತರಿಸಲಾಗುವುದು. ಅದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಸಚಿವ ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಮೇಯರ್ ಭಾಸ್ಕರ ಮೊಯ್ಲಿ, ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಮಾರ್ಟ್ ಸಿಟಿಯಡಿ ಸೆಂಟ್ರಲ್ ಮಾರ್ಕೆಟ್

ನಗರದ ಕೇಂದ್ರ ಮಾರುಕಟ್ಟೆ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕೈಗೆತ್ತಿಕೊಂಡು ಸಮಯದ ಪರಿಮಿತಿಯೊಳಗೆ ನಿರ್ಮಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಈ ಹಿಂದೆ ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಈ ಮಾರುಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಈ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲೇ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News