‘ತಾತ್ಕಾಲಿಕವಾಗಿ ಹುದ್ದೆ ತ್ಯಜಿಸಲು ಸಿದ್ಧ’: ಪೋಪ್‌ಗೆ ಜಲಂಧರ್ ಬಿಷಪ್ ಪತ್ರ

Update: 2018-09-17 13:24 GMT

ಕೊಚ್ಚಿ,ಸೆ.17: ಜಲಂಧರ್ ಧರ್ಮಪ್ರಾಂತ್ಯದ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ಕೆಳಗಿಳಿಯುವುದಾಗಿ ಕ್ರೈಸ್ತ ಸನ್ಯಾಸಿನಿಯೋರ್ವರ ಮೇಲೆ ಅತ್ಯಾಚಾರವೆಸಗಿದ ಆರೋಪವನ್ನು ಎದುರಿಸುತ್ತಿರುವ ಫಾ.ಫ್ರಾಂಕೊ ಮುಳಕ್ಕಲ್ ಅವರು ರವಿವಾರ ಪೋಪ್ ಫ್ರಾನ್ಸಿಸ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಮುಳಕ್ಕಲ್ ಅವರು ಸೆ.19ರಂದು ಕೇರಳ ಪೊಲೀಸ್‌ನ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ. ತನ್ಮಧ್ಯೆ ಬಿಷಪ್ ಬಂಧನಕ್ಕೆ ಆಗ್ರಹಿಸಿ ವಿವಿಧ ಕ್ರೈಸ್ತ ಸುಧಾರಕ ಸಂಘಗಳು ಮತ್ತು ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ 10ನೇ ದಿನಕ್ಕೆ ಕಾಲಿರಿಸಿದೆ.

ಕೊಟ್ಟಾಯಂ ಜಿಲ್ಲೆಯ ಕುರುವಿಲಂಗಾಡ್‌ನಲ್ಲಿ ಜಲಂಧರ್ ಧರ್ಮಪ್ರಾಂತ್ಯವು ನಡೆಸುತ್ತಿರುವ ಕಾನ್ವೆಂಟ್‌ಗೆ 2014 ಮತ್ತು 2016ರ ನಡುವೆ ಭೇಟಿಗಳನ್ನು ನೀಡಿದ್ದ ಸಂದರ್ಭ ಬಿಷಪ್ ಮುಳಕ್ಕಲ್ ಅವರು ತನ್ನ ಮೇಲೆ 13 ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಕೇರಳ ಮೂಲದ ಸನ್ಯಾಸಿನಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ವ್ಯಾಟಿಕನ್ ಹಸ್ತಕ್ಷೇಪವನ್ನು ಕೋರಿ ಇತ್ತೀಚಿಗೆ ಪತ್ರ ಬರೆದಿದ್ದ ಅವರು ಮುಳಕ್ಕಲ್ ಅವರನ್ನು ಬಿಷಪ್ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.ಅಲ್ಲದೆ,ತನಗಾಗಿರುವ ಅನ್ಯಾಯವನ್ನು ಬಹಿರಂಗಗೊಳಿಸಲು ತಾನೇ ಧೈರ್ಯ ವಹಿಸಿರುವಾಗ ಚರ್ಚ್ ಏಕೆ ಸತ್ಯದತ್ತ ಕಣ್ಣು ಮುಚ್ಚಿಕೊಂಡಿದೆ ಎಂದೂ ಪ್ರಶ್ನಿಸಿದ್ದಾರೆ.

ಆದರೆ ಬಿಷಪ್ ಅವರು ತನ್ನ ವಿರುದ್ಧದ ಆರೋಪಗಳು ನಿರಾಧಾರ ಮತ್ತು ಕಪೋಲಕಲ್ಪಿತ ಎಂದು ತಳ್ಳಿಹಾಕಿದ್ದಾರೆ. ಬಿಷಪ್ ಬಂಧನಕ್ಕೆ ಸಾಕ್ಷಾಧಾರಗಳ ಕೊರತೆಯಿದೆ ಎದು ಹೇಳುವ ಮೂಲಕ ಕೇರಳ ಉಚ್ಚ ನ್ಯಾಯಾಲಯವು ಅವರ ಅಮಾಯಕತೆಯನ್ನು ಬೆಟ್ಟು ಮಾಡಿ ಅವರ ಪರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ಕೆಳಗಿಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರ ಎಂದು ಜಲಂಧರ್ ಧರ್ಮಪ್ರಾಂತ್ಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕೇರಳಕ್ಕೆ ಭೇಟಿ ನೀಡಲಿರುವುದರಿಂದ ಬಿಷಪ್ ತನ್ನ ಅನುಪಸ್ಥಿತಿಯಲ್ಲಿ ಜಲಂಧರ್ ಧರ್ಮಪ್ರಾಂತ್ಯದ ಆಡಳಿತಾತ್ಮಕ ಹೊಣೆಗಾರಿಕೆಯನ್ನು ಫಾ.ಮ್ಯಾಥ್ಯೂ ಕೊಕ್ಕಂಡಂ ಅವರಿಗೆ ಕಳೆದ ವಾರ ಹಸ್ತಾಂತರಿಸಿದ್ದರು. ಮುಳಕ್ಕಲ್ ವಿರುದ್ಧ ಕ್ರಮಕ್ಕಾಗಿ ಪೊಲೀಸರ ಮೇಲೆ ಹೆಚ್ಚುತ್ತಿದ್ದ ಒತ್ತಡಗಳ ನಡುವೆಯೇ ಕಳೆದ ವಾರ ಎರ್ನಾಕುಳಂ ವಲಯದ ಐಜಿಪಿ ವಿಜಯ ಸಾಖರೆ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬಿಷಪ್‌ರನ್ನು ವಿಚಾರಣೆಗಾಗಿ ಕರೆಸಲು ನಿರ್ಧರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News