ಪಾಕಿಸ್ತಾನವನ್ನು ಈಗಲೂ ಸೇನೆಯೇ ಆಳುತ್ತಿದೆ, ಮುಂದಿನದನ್ನು ಕಾದು ನೋಡೋಣ: ವಿ.ಕೆ.ಸಿಂಗ್

Update: 2018-09-17 13:49 GMT

ಹೊಸದಿಲ್ಲಿ,ಸೆ.17: ಇಮ್ರಾನ್ ಖಾನ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದರೂ ಈಗಲೂ ಪಾಕಿಸ್ತಾನವನ್ನು ಸೇನೆಯೇ ಆಳುತ್ತಿದೆ ಎಂದು ಸೋಮವಾರ ಇಲ್ಲಿ ಹೇಳಿದ ಕೇಂದ್ರ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಅವರು, ಈ ಪ್ರಧಾನಿ ಏನಾದರೂ ಬದಲಾವಣೆಗಳನ್ನು ತರಲು ಸಮರ್ಥರಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ ಎಂದರು.

ಪಾಕಿಸ್ತಾನದಲ್ಲಿ ಸರಕಾರ ಬದಲಾವಣೆಯ ಬಳಿಕ ಗಡಿಯಲ್ಲಿ ನುಸುಳುವಿಕೆ ಘಟನೆಗಳ ಕುರಿತು ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಪಾಕಿಸ್ತಾನದಲ್ಲಿ ಸೇನೆಯಿಂದ ಪ್ರಾಯೋಜಿತ ವ್ಯಕ್ತಿ ಆಯ್ಕೆಯಾಗಿದ್ದಾರೆ. ಅಲ್ಲಿ ಈಗಲೂ ಸೇನೆಯ ಆಡಳಿತವಿದೆ. ಆ ವ್ಯಕ್ತಿ ಸೇನೆಯ ನಿಯಂತ್ರಣದಿಂದ ಹೊರಗೆ ಬರುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡುವುದು ನಮ್ಮ ನಿಲುವಾಗಿದೆ ಎಂದು ಇಮ್ರಾನ್ ಖಾನ್ ಹೆಸರನ್ನು ಪ್ರಸ್ತಾಪಿಸದೆ ಹೇಳಿದರು.

ಇಲ್ಲಿ ಫಿಕ್ಕಿ ಆಯೋಜಿಸಿರುವ ಎರಡು ದಿನಗಳ ‘ಸ್ಮಾರ್ಟ್ ಬಾರ್ಡರ್ ಮ್ಯಾನೇಜ್‌ಮೆಂಟ್’ ಸಮ್ಮೇಳನದ ನೇಪಥ್ಯದಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಮಾತುಕತೆಗಳನ್ನು ಮುಂದುವರಿಸಲು ಪ್ರಯತ್ನಿಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಂಗ್ ಅವರು,ಭಾರತದ ನೀತಿಯು ಅತ್ಯಂತ ಸ್ಪಷ್ಟವಿದೆ.ಪೂರಕ ವಾತಾವರಣವಿದ್ದರೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುತ್ತದೆ ಎಂದು ಉತ್ತರಿಸಿದರು.

ಸಿಖ್ ಯಾತ್ರಿಗಳಿಗಾಗಿ ಕರ್ತಾರಪುರ ಗಡಿಯನ್ನು ತೆರೆಯುವ ಪ್ರಸ್ತಾವಗಳ ವರದಿಗಳ ಕುರಿತಂತೆ ಅವರು,ಭಾರತವು ಅಂತಹ ಯಾವುದೇ ಪ್ರಸ್ತಾವವನ್ನು ಪಾಕಿಸ್ತಾನದಿಂದ ಸ್ವೀಕರಿಸಿಲ್ಲ ಎಂದು ಹೇಳಿದರು.

  ಇದಕ್ಕೂ ಮುನ್ನ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು,ಭಾರತದ ಗಡಿಯು ವಿಶಿಷ್ಟವಾಗಿದ್ದು,ಬಯಲು ಪ್ರದೇಶಗಳು,ಮರಳುಗಾಡು,ಪರ್ವತಗಳು ಮತ್ತು ಇತರ ದುರ್ಗಮ ಪ್ರದೇಶಗಳಿಂದ ಕೂಡಿದೆ. ಹೀಗಾಗಿ ನಮ್ಮ ಗಡಿರಕ್ಷಣಾ ವ್ಯವಸ್ಥೆಯೂ ವಿಭಿನ್ನತೆಗಳಿಂದ ಕೂಡಿರಬೇಕಾಗುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News