ಏಶ್ಯಕಪ್: ಲಂಕಾ ವಿರುದ್ಧ ಅಫ್ಘಾನಿಸ್ತಾನ 249 ರನ್‌ಗೆ ಆಲೌಟ್

Update: 2018-09-17 15:32 GMT

ಅಬುಧಾಬಿ, ಸೆ.17: ಅಗ್ರ ಕ್ರಮಾಂಕದ ದಾಂಡಿಗ ರಹಮತ್ ಶಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಆಲ್‌ರೌಂಡರ್ ತಿಸಾರ ಪೆರೇರ(5-55) ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಏಶ್ಯಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 249 ರನ್ ಗಳಿಸಿ ಸರ್ವಪತನಗೊಂಡಿದೆ.

ಸೋಮವಾರ ಟಾಸ್ ಜಯಿಸಿದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಶ್ರೀಲಂಕಾ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಎರಡನೇ ಬಾರಿ ಟಾಸ್ ಸೋತರು.

ಅಫ್ಘಾನ್ ಪರ ಇನಿಂಗ್ಸ್ ಆರಂಭಿಸಿದ ಶಹಝಾದ್(34) ಹಾಗೂ ಇಹ್ಸಾನುಲ್ಲಾ(45)ಮೊದಲ ವಿಕೆಟ್‌ಗೆ 57 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಧನಂಜಯ(2-39) ಬೇರ್ಪಡಿಸಿದರು.

ಶಹಝಾದ್ ಔಟಾದ ಬಳಿಕ ರಹಮತ್ ಶಾ ಕ್ರೀಸ್‌ಗೆ ಇಳಿದರು. ಶಾ ಅವರು ಇಹ್ಸಾನುಲ್ಲಾ ಅವರೊಂದಿಗೆ 2ನೇ ವಿಕೆಟ್‌ಗೆ ಬರೋಬ್ಬರಿ 50 ರನ್ ಜೊತೆಯಾಟ ನಡೆಸಿದರು.

ಇಹ್ಸಾನುಲ್ಲಾ ಹಾಗೂ ನಾಯಕ ಅಸ್ಘರ್ ಅಫ್ಘನ್(1)ಬೆನ್ನುಬೆನ್ನಿಗೆ ಔಟಾದರು. ಆಗ ಹಶ್ಮತುಲ್ಲಾ ಶಾಹಿದಿ(37) ಅವರೊಂದಿಗೆ ಕೈಜೋಡಿಸಿದ ಶಾ 4ನೇ ವಿಕೆಟ್‌ಗೆ 80 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. 72 ರನ್(90 ಎಸೆತ, 5 ಬೌಂಡರಿ)ಗಳಿಸಿ ತಾಳ್ಮೆಯ ಇನಿಂಗ್ಸ್ ಆಡಿದ ರಹಮತ್ ಶಾಗೆ ದಶ್ಮಂತಾ ಚಾಮೀರಾ ಪೆವಿಲಿಯನ್ ಹಾದಿ ತೋರಿಸಿದರು. ಅಫ್ಘಾನಿಸ್ತಾನ ಕೆಳ ಕ್ರಮಾಂಕದ ನಾಲ್ವರು ಆಟಗಾರರನ್ನು ಔಟ್ ಮಾಡಿದ ಪೆರೇರ ಎದುರಾಳಿ ತಂಡವನ್ನು 249 ರನ್‌ಗೆ ಕಟ್ಟಿಹಾಕಿದರು.

ಶನಿವಾರ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಶ್ರೀಲಂಕಾ ಇಂದಿನ ಪಂದ್ಯದಲ್ಲಿ ಮೂರು ಬದಲಾವಣೆ ಮಾಡಿತ್ತು. ಆಫ್ ಸ್ಪಿನ್ನರ್ ಅಕಿಲಾ ಧನಂಜಯ ತಂಡಕ್ಕೆ ವಾಪಸಾದರು. ವೇಗದ ಬೌಲರ್ ದಶ್ಮಂತಾ ಚಾಮೀರ ಜನವರಿ ಬಳಿಕ ಮೊದಲ ಏಕದಿನ ಪಂದ್ಯವನ್ನಾಡುವ ಅವಕಾಶ ಪಡೆದರು.

  ಆಫ್ ಸ್ಪಿನ್ ಆಲ್‌ರೌಂಡರ್ ಶೆಹಾನ್ ಜಯಸೂರ್ಯ ಆಡುವ ಬಳಗ ಸೇರಿಕೊಂಡರು. ಬಾಂಗ್ಲಾ ವಿರುದ್ಧ ಆಡಿದ್ದ ದಿಲ್‌ರುವಾನ್ ಪೆರೇರ, ಅಮಿಲಾ ಅಪೊನ್ಸೊ ಹಾಗೂ ಸುರಂಗ ಲಕ್ಮಲ್‌ರನ್ನು ಆಡುವ ಬಳಗದಿಂದ ಹೊರಗಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News