ನಾಳೆ ಭಾರತಕ್ಕೆ ಹಾಂಕಾಂಗ್ ಎದುರಾಳಿ

Update: 2018-09-17 18:25 GMT

ದುಬೈ, ಸೆ.17: ಹಾಲಿ ಚಾಂಪಿಯನ್ ಭಾರತ ತಂಡ ಮಂಗಳವಾರ ಇಲ್ಲಿ ನಡೆಯುವ ತನ್ನ ಮೊದಲ ಏಶ್ಯಕಪ್ ‘ಎ’ ಗುಂಪಿನ ಪಂದ್ಯದಲ್ಲಿ ಕ್ರಿಕೆಟ್ ಹಸುಳೆ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಬುಧವಾರ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಬಹುನಿರೀಕ್ಷಿತ ಪಂದ್ಯಕ್ಕೆ ಮೊದಲು ರೋಹಿತ್‌ಪಡೆ ಹಾಂಕಾಂಗ್ ವಿರುದ್ಧ ತಾಲೀಮು ಪಂದ್ಯವನ್ನಾಡಲಿದೆ.

ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮುಂಬೈ ದಾಂಡಿಗ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್ ಪಡೆ ಹಾಂಕಾಂಗ್ ತಂಡವನ್ನು ಹಗುರವಾಗಿ ಪರಿಗಣಿಸಲು ಸಿದ್ಧವಿಲ್ಲ. ಫಾರ್ಮ್‌ನಲ್ಲಿರುವ ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಮುನ್ನಾದಿನ ನಡೆಯುವ ಈ ಪಂದ್ಯ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ.

ದುಬೈನ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಟೀಮ್ ಇಂಡಿಯಾಕ್ಕೆ ಪಾಕ್ ವಿರುದ್ಧ ಪಂದ್ಯಕ್ಕೆ ಮೊದಲು ಸರಿಯಾದ ಕಾಂಬಿನೇಶನ್ ರೂಪಿಸಿಕೊಳ್ಳುವುದೇ ಮುಖ್ಯ ಗುರಿಯಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿದ್ದರೂ ಟೂರ್ನಿಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲೂ ಮ್ಯಾಚ್ ವಿನ್ನರ್‌ಗಳ ದಂಡೇ ಇದೆ. ಹಾಂಕಾಂಗ್ ತಂಡ ರವಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 116 ರನ್ ಗಳಿಸಿ 8 ವಿಕೆಟ್‌ಗಳಿಂದ ಸೋತಿದ್ದು, ಭಾರತ ವಿರುದ್ಧ ಮತ್ತೊಂದು ಸವಾಲಿಗೆ ಸಜ್ಜಾಗಬೇಕಾಗಿದೆ. ರೋಹಿತ್, ಶಿಖರ್ ಧವನ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್ ಬ್ಯಾಟಿಂಗ್‌ನಲ್ಲಿ ತಂಡವನ್ನು ಆಧರಿಸಿದರೆ, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಬೌಲಿಂಗ್ ವಿಭಾಗದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಬ್ಯಾಟಿಂಗ್ ಶಕ್ತಿ ಸೊರಗಿದೆ. ಈ ಟೂರ್ನಿಯಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗುತ್ತಿದೆ. ಪಾಕ್ ವಿರುದ್ಧ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದರೆ ಡೆತ್ ಓವರ್‌ನಲ್ಲಿ ಮುಹಮ್ಮದ್ ಆಮಿರ್, ಉಸ್ಮಾನ್ ಖಾನ್ ಹಾಗೂ ಪ್ರತಿಭಾವಂತ ಹಸನ್ ಅಲಿ ಬೌಲಿಂಗ್‌ನ್ನು ಎದುರಿಸಬೇಕಾಗುತ್ತದೆ.

ಕೇದಾರ್ ಜಾಧವ್, ಮನೀಷ್ ಪಾಂಡೆ ಹಾಗೂ ಅಂಬಟಿ ರಾಯುಡು ತಂಡಕ್ಕೆ ವಾಪಸಾಗಿದ್ದಾರೆ. ಜಾಧವ್ ಅಥವಾ ಪಾಂಡೆ 5ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ 7ನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಭಾರತಕ್ಕೆ ತಲೆನೋವಾಗಿ ಪರಿಗಣಿಸಿದೆ. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಮೊದಲು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕಾಗಿದೆ. ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಪಾಕಿಸ್ತಾನದ ಎಡಗೈ ಬೌಲರ್‌ಗಳ ದಾಳಿಯನ್ನು ಭಾರತದ ದಾಂಡಿಗರು ದಿಟ್ಟವಾಗಿ ಎದುರಿಸುವಂತಾಗಲು ಬಿಸಿಸಿಐ ಈಗಾಗಲೇ ಶ್ರೀಲಂಕಾದ ಎಡಗೈ ಥ್ರೋಡೌನ್ ಸ್ಪೆಷಲಿಸ್ಟ್‌ರನ್ನು ನೆಟ್ ಪ್ರಾಕ್ಟೀಸ್‌ಗೆ ನೇಮಕ ಮಾಡಿದೆ. ಕಿರಿಯ ಬೌಲರ್ ಖಲೀಲ್ ಅಹ್ಮದ್ ಕೂಡ ದಾಂಡಿಗರಿಗೆ ಅತ್ಯಂತ ಅಗತ್ಯದ ಅಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ಬುಮ್ರಾ-ಭುವನೇಶ್ವರ ಅವರು ಕುಲ್‌ದೀಪ್ ಹಾಗೂ ಚಹಾಲ್‌ರೊಂದಿಗೆ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಪಾಕಿಸ್ತಾನ ತಂಡ ಭಾರತದ ಇಬ್ಬರು ಸ್ಪಿನ್ನರ್‌ಗಳಾದ ಕುಲ್‌ದೀಪ್ ಹಾಗೂ ಚಹಾಲ್ ಸವಾಲನ್ನು ಇನ್ನೂ ಎದುರಿಸಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡ ಈ ಇಬ್ಬರನ್ನು ಎದುರಿಸಿಲ್ಲ. ಸರ್ಫರಾಝ್ ಅಹ್ಮದ್ ನೇತೃತ್ವದ ಪಾಕ್ ತಂಡ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಟ್ರೋಫಿ ಜಯಿಸಿತ್ತು.

 ಹಾಂಕಾಂಗ್ ವಿರುದ್ಧ ಪಂದ್ಯವು ಭುವನೇಶ್ವರ್‌ಗೆ ಉತ್ತಮ ಅಭ್ಯಾಸ ಪಂದ್ಯ ಎನಿಸಿಕೊಂಡಿದೆ. ಭುವಿ ಬೆನ್ನುನೋವಿನಿಂದಾಗಿ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ದ.ಆಫ್ರಿಕ ಎ ವಿರುದ್ಧ ಪಂದ್ಯದ ವೇಳೆ ಭಾರತ ಎ ಪರ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News