ಬಿ.ಸಿ.ರೋಡ್: ಎಸ್‌ಡಿಪಿಐಯಿಂದ ಅಭಿನಂದನಾ ಸಭೆ

Update: 2018-09-18 04:30 GMT

ಬಂಟ್ವಾಳ, ಸೆ.17: ಸಮಾಜವನ್ನು ಜೋಡಿಸುವ ಮೂಲಕ ಸಮೃದ್ಧ ಭಾರತವನ್ನು ನಿರ್ಮಿಸುವುದೇ ಪಕ್ಷದ ಮುಖ್ಯ ಉದ್ದೇಶ ಹಾಗೂ ಕನಸು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸೋಮವಾರ ರಾತ್ರಿ ನಡೆದ ಇತ್ತೀಚೆಗಿನ ಪುರಸಭಾ ಚುನಾವಣೆಯಲ್ಲಿ ಎಸ್‌ಡಿಪಿಐಯಿಂದ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕರ್ತರ ಅನಿರತ ಶ್ರಮದಿಂದ ಪಕ್ಷಕ್ಕೆ ಗೆಲುವಾಗಿದ್ದು, ಮತದಾರ ಬಾಂಧವರು ಮತ್ತೊಮ್ಮೆ ಪಕ್ಷದ ಕೈ ಹಿಡಿದು ಅವಕಾಶ ನೀಡಿದ್ದಾರೆ. ಉಳ್ಳಾಲದಲ್ಲಿ 6, ಬಂಟ್ವಾಳ 4, ಪುತ್ತೂರು 1 ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದರು.

ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆಯ ಮೂಲಕ ಹುಟ್ಟಿಕೊಂಡ ಪಕ್ಷ ಎಸ್‌ಡಿಪಿಐ. ಇದು ಪಕ್ಷದ ಗೆಲುವಲ್ಲ. ಕಾರ್ಯಕರ್ತರ ಗೆಲುವಾಗಿದೆ. ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಎಸ್‌ಡಿಪಿಐ ವಿಜಯ ಪತಾಕೆ ಹಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ವಕೀಲ ಅಬ್ದುಲ್ ಮಜೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಮಾಜಿ ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್, ಇಜಾಝ್ ಅಹ್ಮದ್, ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ರಾಮಣ್ಣ ಶೆಟ್ಟಿ, ಹನೀಫ್ ಖಾನ್ ಕೊಡಾಜೆ, ಉಸ್ಮಾನ್ ಕೊಮೋರು, ಎನ್‌ಡಬ್ಲ್ಯುಎಫ್‌ನ ಸದಸ್ಯರಾದ ರುಬೀನಾ, ಶಂಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಶಂಸಾದ್, ಝೀನತ್ ಫಿರೋಝ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್ ಸಹಿತ ಎಸ್ಡಿಪಿಐ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು.

ಕ್ಷೇತ್ರ ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ ಸ್ವಾಗತಿಸಿದರು. ಸಮಿತಿಯ ಸದಸ್ಯ ಮಲಿಕ್ ವಂದಿಸಿದರು. ರಹಿಮಾನ್ ಮಠ, ಸಿದ್ದೀಕ್ ನಂದರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಇಸ್ಹಾಕ್ ತಲಪಾಡಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News