ಮೆಲ್ಕಾರ್: ಬ್ಯಾರಿ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ

Update: 2018-09-18 07:35 GMT

ಮಂಗಳೂರು, ಸೆ.18: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರಿನ ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಸಹಯೋಗದಲ್ಲಿ ಬ್ಯಾರಿ ಶಿಕ್ಷಕರ ದಿನಾಚರಣೆ ಮತ್ತು ವರ್ಷದ ಬ್ಯಾರಿ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವು ಸಜೀಪಮುನ್ನೂರಿನ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ರವಿವಾರ ಜರುಗಿತು.

ಮೆಲ್ಕಾರ್ ಮಹಿಳಾ ಕಾಲೇಜಿನ ಸ್ಥಾಪಕಾಧ್ಯಕ್ಷ ಎಸ್.ಎಂ.ರಶೀದ್ ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸುವ ಶಿಕ್ಷಕ ವೃತ್ತಿ ಪವಿತ್ರ ಮತ್ತು ಜವಾವ್ದಾರಿಯಿಂದ ಕೂಡಿದ್ದು. ಅವರಿಗಾಗಿ ದಿನಾಚರಣೆ ರೂಪಿಸಿ, ಪ್ರಶಸ್ತಿ ನೀಡುವ ಬ್ಯಾರಿ ಅಕಾಡಮಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ. ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುವ ಶಿಕ್ಷಕರ ಅಗತ್ಯವಿದೆ. ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಅಕಾಡಮಿಯು ಬ್ಯಾರಿ ಸಮುದಾಯದ ಶಿಕ್ಷಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸಿದೆ. ಮುಂದೆ ಇನ್ನಷ್ಟು ಕಾರ್ಯಕ್ರಮ ನಡೆಸಲು, ಎಲ್ಲರ ಸಲಹೆ, ಸಹಕಾರದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿ, ಬ್ಯಾರಿ ಅಕಾಡಮಿ ಉತ್ತಮ ಕೆಲಸ ಮಾಡುತ್ತಿದೆ. ಬ್ಯಾರಿ ಭಾಷೆಯ ಕಲೆ, ಸಾಹಿತ್ಯ ಉಳಿಸಿ, ಬೆಳೆಸುವ ಜತೆಗೆ ಸಾಹಿತ್ಯದ ಮೂಲಕವೇ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿ, ಯುವಕರನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಅಧ್ಯಕ್ಷ ಸಮೀಉಲ್ಲಾ, ಕಾರ್ಯಕ್ರಮದ ಸದಸ್ಯ ಸಂಚಾಲಕ ಬಶೀರ್ ಬೈಕಂಪಾಡಿ, ಅಕಾಡಮಿಯ ಸದಸ್ಯರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಬಶೀರ್ ಕಿನ್ಯ, ಆಯಿಷಾ ಯು.ಕೆ., ಮರಿಯಂ ಇಸ್ಮಾಯೀಲ್, ಸಲೀಂ ಬರಿಮಾರ್, ಅನ್ಸಾರ್ ಬೆಳ್ಳಾರೆ, ತನ್ಸಿಫ್ ಬಿ.ಎಂ., ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಲತೀಫ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಇದೇ ಸಂದರ್ಭ ಸುಜೀರು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಬಿ.ಮುಹಮ್ಮದ್ ತುಂಬೆ ಅವರಿಗೆ 2018ನೇ ಸಾಲಿನ 'ವರ್ಷದ ಬ್ಯಾರಿ ಶಿಕ್ಷಕ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಮುಹಮ್ಮದ್ ತುಂಬೆ ದಿಕ್ಸೂಚಿ ಭಾಷಣ ಮಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಶಿಕ್ಷಕ ಅಬ್ದುರ್ರ ಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News