ಅಮ್ಟಾಡಿ: ಪೋಡಿ ಮುಗೇರ್ತಿ ಕತ್ತಲ ಬದುಕಿಗೆ ಬೆಳಕು ನೀಡಿದ ರೋಟರಿ ಕ್ಲಬ್

Update: 2018-09-18 08:32 GMT

ಬಂಟ್ವಾಳ, ಸೆ.18: ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯ ಮನೆಯೊಂದರಲ್ಲಿ ವಾಸಿಸುತ್ತಿರುವ ಅನಾಥೆ ವೃದ್ಧೆ ಪೋಡಿ ಮುಗೇರ್ತಿ ಅವರಿಗೆ ಉಚಿತ ಗ್ಯಾಸ್ ವಿತರಣೆ ಹಾಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಬಂಟ್ವಾಳ ರೋಟರಿ ಕ್ಲಬ್ ಮಾನವೀಯತೆ ಮೆರೆದಿದ್ದು, ಪೊಡಿ ಮುಗೇರ್ತಿಯ ಕತ್ತಲ ಬದುಕು ಬೆಳಕಾಗಿದೆ.

ಬಂಟ್ವಾಳ ಭದ್ರಾ ಗ್ಯಾಸ್ ಏಜೆನ್ಸಿಯ ಮಾಲಕ ಮಂಜುನಾಥ ಆಚಾರ್ಯ ನೀಡಿದ ಭರವಸೆಯಂತೆ ಪೋಡಿ ಮುಗೇರ್ತಿಯ ನಿವಾಸಕ್ಕೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಿದ್ದಾರೆ.

ಈ ಸಂದರ್ಭ ಬಂಟ್ಚಾಳ ನಗರ ಪೊಲೀಸ್ ಠಾಣಾ ಎಸ್ಸೈ ಚಂದ್ರಶೇಖರ್, ಬೀಟ್ ಪೊಲೀಸ್ ಸಿಬ್ಬಂದಿ ಮೋಹನ್, ವಿಜಯ ರೋಟೆರಿಯನ್‌ಗಳಾದ ಮೇಘಾ ಆಚಾರ್ಯ, ಪ್ರಭಾಕರ ಪ್ರಭು, ಸ್ಥಳೀಯ ನಿವಾಸಿ ಕಮಾಲಾಕ್ಷ ಉಪಸ್ಥಿತರಿದ್ದರು.

ಕತ್ತಲ ಬದುಕು:
ಕೆಂಪು ಗುಡ್ಡೆ ನಿವಾಸಿ ದಿ.ಕುಕ್ಕ ಮುಗೇರ ಅವರ ಪತ್ನಿ ಪೋಡಿ ಮುಗೇರ್ತಿ(67) ಅವರ ಮನೆಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಪರಿಶಿಷ್ಟ ಜಾತಿಗೊಳಪಟ್ಟ ಈ ಒಂಟಿ ಜೀವ ಕತ್ತಲ ಕೋಣೆಯಲ್ಲೆ ಜೀವನ ಸಾಗಿಸುತ್ತಿತ್ತು. ಇವರ ಪತಿ ಕುಕ್ಕ ಮುಗೇರ ಅನಾರೋಗ್ಯಕ್ಕೆ ತುತ್ತಾಗಿ ಹತ್ತು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಸದ್ಯ ಈಕೆಗೆ ತನ್ನ ಬಂಧು, ಬಳಗ ಯಾರು ಇಲ್ಲ. ಈ ಗ್ರಾಮದ ಬೀಟ್ ಪೊಲೀಸರಾದ ಮೋಹನ್ ಮತ್ತು ಮಲ್ಲಿಕಾ ಅವರು ಬೀಟ್ ರೌಂಡ್ಸ್‌ನಲ್ಲಿದ್ದಾಗ ಪೋಡಿ ಮುಗೇರ್ತಿಯ ಬದುಕು ಕಂಡು ಮರುಕಪಟ್ಟರು.
ತಕ್ಷಣ ಅವರು ಈ ವಿಚಾರವನ್ನು ನಗರ ಠಾಣೆ ಯ ಎಸ್ಸೈ ಚಂದ್ರಶೇಖರ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಮಾಧ್ಯಮಗಳ ವರದಿಗೆ ಸ್ಪಂದಿಸಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಗ್ಯಾಸ್ ಸಂಪರ್ಕ, ಸೋಲಾರ್ ದೀಪ ಅಳವಡಿಸುವ ಮೂಲಕ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News