ವಿಟ್ಲ ಪಟ್ಟಣ ಪಂಚಾಯತ್‍ನಿಂದ ತಾರತಮ್ಯ ನೀತಿ: ಕಾಂಗ್ರೆಸ್ ಆರೋಪ

Update: 2018-09-18 12:19 GMT

ಬಂಟ್ವಾಳ, ಸೆ. 18: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ಇತ್ತೀಚೆಗೆ ಗಣೇಶೋತ್ಸವ ಶೋಭಾಯಾತ್ರೆ ಸಂದರ್ಭ ಮಾಡಿದ ದುರಸ್ತಿ ಕಳಪೆಯಾಗಿದೆ. ಅಲ್ಲದೇ ಪಟ್ಟಣ ಪಂಚಾಯತ್ ಬಡವರಿಗೆ, ಜನಸಾಮಾನ್ಯರಿಗೆ ಒಂದು ನೀತಿ, ಧನಿಕರಿಗೆ ಒಂದು ನೀತಿಯನ್ನು ಅನುಸರಿಸುತ್ತಿದೆ. ಇಂತಹ ತಾರತಮ್ಯ ನೀತಿಯನ್ನು ಖಂಡಿಸುತ್ತೇವೆ ಎಂದು ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಹೇಳಿದ್ದಾರೆ.

ಅವರು ಮಂಗಳವಾರ ವಿಟ್ಲ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರೋತ್ಥಾನದಲ್ಲಿ ಕಚೇರಿಗಾಗಿ ಅನುದಾನ ಬಿಡುಗಡೆಗೊಳಿಸಿ, ತತ್‍ಕ್ಷಣ ಕಾಮಗಾರಿ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಈಗಿನ ಕಚೇರಿಗೆ ಕ್ಯಾಬಿನ್ ನಿರ್ಮಿಸಿದ ಉದ್ದೇಶವೇನು? ಕಾಂಗ್ರೆಸ್ ಆಡಳಿತದ ಗ್ರಾಪಂ ಕಚೇರಿಯಲ್ಲಿ ಕ್ಯಾಬಿನ್  ನಿರ್ಮಿಸಲಾಗಿತ್ತು. ಈಗ ಮತ್ತೆ ಕ್ಯಾಬಿನ್ ನಿರ್ಮಿಸುವುದನ್ನು ಗಮನಿಸಿದಾಗ ಅವ್ಯವಹಾರದ ಶಂಕೆ ವ್ಯಕ್ತವಾಗುತ್ತದೆ ಎಂದು ಅವರು ಆಕ್ಷೇಪಿಸಿದರು.

ಪಪಂಗೆ ಭಾರೀ ಅನುದಾನ ಬರುತ್ತಿದೆ. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಿಕ್ಷಾ ನಿಲ್ದಾಣಕ್ಕೆ ಮಂಗಳೂರು ಶೈಲಿಯಲ್ಲಿ ತಡೆಬೇಲಿ ಹಾಕಲಾಗುತ್ತಿದೆ. ಇದು ರಿಕ್ಷಾ ಚಾಲಕರನ್ನು ತೊಂದರೆಗೀಡು ಮಾಡುತ್ತದೆ. ಪಾರ್ಕಿಂಗ್ ನಿಯಮಗಳು ಇನ್ನೂ ಅನುಷ್ಠಾನಕ್ಕೇ ಬರಲಿಲ್ಲ. ಬಸ್‍ಗಳು ರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಇದಕ್ಕೆ ಕ್ರಮ ಕೈಗೊಳ್ಳುವವರೇ ಇಲ್ಲ. ಈ ತಿಂಗಳ ಕೊನೆಯೊಳಗೆ ಈ ಎಲ್ಲ ವಿಚಾರಗಳಲ್ಲಿ ಕ್ರಮಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ತೆರೆಸಾ ಪೀಟರ್, ಕಾರ್ಯದರ್ಶಿ ಸಂತೋಷ್ ಕುಮಾರ್ ಮಾರ್ಣೆಮಿಗುಡ್ಡೆ, ಇಂಟಕ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News