ವಿದೇಶಗಳಲ್ಲಿ ದುಡಿಯುವವರ ನೆರವಿಗಾಗಿ ‘ಎನ್‌ಆರ್‌ಐ ಸೆಲ್’

Update: 2018-09-18 14:22 GMT

ಉಡುಪಿ, ಸೆ.18: ಯಾವುದೇ ಹೊರದೇಶಗಳಲ್ಲಿ ದುಡಿಯುತ್ತಿರುವ ಜಿಲ್ಲೆಯ ಜನತೆ, ಅಲ್ಲಿ ಯಾವುದೇ ಸಮಸ್ಯೆ, ತೊಂದರೆಗೆ ಸಿಲುಕಿದರೆ, ಅವರು ಆಯಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ‘ಎನ್‌ಆರ್‌ಐ ಸೆಲ್’ನ ಮೂಲಕ ಅಗತ್ಯ ನೆರವನ್ನು ಪಡೆಯಬಹುದು ಎಂದು ಸೆಲ್‌ನ ಸಂಚಾಲಕ ರಾಗಿರುವ ಕುಂದಾಪುರದ ಉಪವಿಭಾಗಾಧಿಕಾರಿ ಭೂಬಾಲನ್ ಹೇಳಿದ್ದಾರೆ.

ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಅನಿವಾಸಿ ಭಾರತೀಯ ಹಿತರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಲಾದ ‘ಹೊರದೇಶಗಳಲ್ಲಿ ದುಡಿಯುವ ಅವಿದ್ಯಾವಂತ ಕಾರ್ಮಿಕರ ಹಿತರಕ್ಷಣೆಯಲ್ಲಿ ಸಂಘ ಸಂಸ್ಥೆಗಳ ಹಾಗೂ ಸರಕಾರಿ ಅಧಿಕಾರಿಗಳ ಪಾತ್ರ’ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು. ಎನ್‌ಆರ್‌ಐ ಸೆಲ್‌ಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸದಸ್ಯರಾಗಿರುತ್ತಾರೆ ಎಂದರು.

ಉಡುಪಿ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯ ಜನರು ವೈವಿದ್ಯಮಯ ಉದ್ಯೋಗಳನ್ನು ಅರಸಿ ವಿದೇಶಗಳಿಗೆ ತೆರಳುತ್ತಾರೆ. ಇವರಲ್ಲಿ ವಿದ್ಯಾವಂತರು, ಅವಿದ್ಯಾವಂತರು, ಇಂಜಿನಿಯರ್‌ಗಳು, ವೈದ್ಯರು, ತಾಂತ್ರಿಕ ಪರಿಣಿತಿ ಹೊಂದಿ ರುವವರು, ಕುಶಲ-ಅಕುಶಲ ಕಾರ್ಮಿಕರು, ಪುರುಷರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಇರುತ್ತಾರೆ ಎಂದವರು ನುಡಿದರು.

ಆದರೆ ಅಲ್ಲಿಗೆ ತೆರಳುವ ಬಹುಪಾಲು ಮಂದಿಗೆ ತಾವು ತೆರಳುವ ದೇಶದ ಕಾನೂನಿನ ಮೂಲಭೂತ ಅರಿವೇ ಇರುವುದಿಲ್ಲ. ಅಲ್ಲಿ ಸಮಸ್ಯೆಗಳಿಗೆ ಸಿಲುಕಿ ದಾಗ ಯಾರನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು ಎಂಬ ಪ್ರಾಥಮಿಕ ಮಾಹಿತಿ ಇಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಹೊರದೇಶದಲ್ಲಿ ದುಡಿಯುತ್ತಿರುವವರು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಎನ್‌ಆರ್‌ಐ ಸೆಲ್‌ನ್ನು ಸಂಪರ್ಕಿಸಿ ನೆರವು ಪಡೆಯಬೇಕು ಎಂದು ಭೂಬಾಲನ್ ತಿಳಿಸಿದರು.

ವಿಷಯದ ಕುರಿತು ಸವಿಸ್ತಾರವಾಗಿ ಮಾತನಾಡಿದ ಉಡುಪಿ ಮಾನವ ಹಕ್ಕು ಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಬಾಗ್, ಇಲ್ಲಿ ಬಡತನ ದಿಂದ ಮುಕ್ತಿ ಪಡೆಯಲು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಹೋಗಿ ಬೇರೆ ಬೇರೆ ಕಾರಣಗಳಿಗೆ ಅಲ್ಲಿ ಸಮಸ್ಯೆಗಳಿಗೆ ಸಿಲುಕಿ ಒದ್ದಾಟ ನಡೆಸಿದ ಹಲವರ ಉದಾಹರಣೆಗಳನ್ನು ನೀಡಿದರು. ಇದೇ ವೇಳೆ ಅಲ್ಲಿರುವ ಅನೇಕರು ದೇಶ, ಜಾತಿ, ಮತ, ಧರ್ಮದ ಹಂಗೇ ಇಲ್ಲದೇ ಅಂಥವರ ನೆರವಿಗೆ ಧಾವಿಸುವ ಸಹೃದಯೆಯನ್ನು ಸಹ ಅವರು ವಿವರಿಸಿದರು.

ಪ್ರತಿಯೊಂದು ದೇಶಗಳೂ ತನ್ನದೇ ಆದ ಕಾನೂನುಗಳನ್ನು ಹೊಂದಿರುತ್ತವೆ. ಉದ್ಯೋಗಕ್ಕಾಗಿ ಆ ದೇಶಗಳಿಗೆ ತೆರಳುವ ಮಂದಿ, ಯಾರೇ ಆದರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಉಡುಪಿ ಜಿಲ್ಲೆಯೊಂದರಲ್ಲೇ ಸುಮಾರು 2ರಿಂದ 3 ಸಾವಿರ ಮಂದಿ ಪ್ರತಿ ವರ್ಷ ಉದ್ಯೋಗವನ್ನರಸಿ ವಿದೇಶಕ್ಕೆ ತೆರಳುತ್ತಾರೆ. ಬಹುತೇಕ ಮಂದಿ ಅಲ್ಲಿಗೆ ತೆರಳುವಾಗ ಖಾಸಗಿ ಏಜೆಂಟರುಗಳ ಮೂಲಕ ತೆರಳುತ್ತಾರೆ. ಇದು ಮುಂದೆ ಅವರನ್ನು ಅಪಾಯದ ಮಡುವಿಗೆ ತಳ್ಳುವ ಸಾಧ್ಯತೆ ಇರುತ್ತದೆ ಎಂದವರು ಎಚ್ಚರಿಸಿದರು.

ಜಿಲ್ಲೆಯ ಪ್ರತಿಯೊಬ್ಬ ವಿದೇಶಿ ನೇಮಕಾತಿ ಏಜೆಂಟ್‌ರು (ಒಆರ್‌ಎ) ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಜಿಲೆನ್ಸ್ ಸೆಲ್‌ಗಳಲ್ಲಿ ನೊಂದಾಯಿಸಿ ಗೊಂಡಿರಬೇಕಾಗುತ್ತದೆ. ವಿದೇಶದಲ್ಲಿ ಉದ್ಯೋಗ ಒದಗಿಸುವ ಸಂಸ್ಥೆಗಳು ನೊಂದಣಿಗೊಳ್ಳಲು 8 ಲಕ್ಷ ರೂ. ನಿಶ್ಚಿತ ಠೇವಣಿ ಹಾಗೂ 50 ಲಕ್ಷ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ. ಹಾಗೂ ತಾವು ಉದ್ಯೋಗ ಒದಗಿಸಿದ ನೌಕರರ ಪೂರ್ಣ ವಿವರಗಳನ್ನು ಪ್ರತಿತಿಂಗಳು ಸಲ್ಲಿಸಬೇಕಾಗುತ್ತದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದೇ ಒಂದು ನೊಂದಾಯಿತ ವಿದೇಶದಲ್ಲಿ ಉದ್ಯೋಗ ಒದಗಿಸುವ ಸಂಸ್ಥೆ ಇಲ್ಲ ಎಂದು ಡಾ. ಶಾನುಬಾಗ್ ವಿವರಿಸಿದರು.

ಖಾಸಗಿ ಏಜೆಂಟರುಗಳ ಮೂಲಕ ವಿದೇಶಕ್ಕೆ ತೆರಳಿದರೆ ಅಲ್ಲಿ ಅವರ ಔದ್ಯೋಗಿಕ ಮಾಹಿತಿ, ಅಲ್ಲಿನ ಅವರ ಸ್ಥಿತಿ-ಗತಿ ಕುರಿತು ಮಾಹಿತಿ ಪಡೆಯುವುದು ತುಂಬಾ ಕಷ್ಟ. ಹೀಗಾಗಿ ಜಿಲ್ಲೆಯಲ್ಲಿ ಖಾಸಗಿ ಏಜೆಂಟ್ ಮೂಲಕ ವಿದೇಶಕ್ಕೆ ತೆರಳುವವರೇ ಸಂಕಷ್ಟಗಳಿಗೆ ಗುರಿಯಾಗುತಿದ್ದಾರೆ ಎಂದವರು ವಿವರಿಸಿದರು. ಬಹುತೇಕ ಮಂದಿ ಇಂಥ ಏಜೆಂಟ್‌ರು ಮಾನವ ಕಳ್ಳ ಸಾಗಾಣಿಕೆಯಲ್ಲಿ ನಿರತರಾಗಿರುತ್ತಾರೆ ಎಂದೂ ಅವರು ಹೇಳಿದರು.

ವಿದೇಶದಲ್ಲಿ ಅದರಲ್ಲೂ ವಿಶೇಷವಾಗಿ ಕೊಲ್ಲಿರಾಷ್ಟ್ರಗಳಲ್ಲಿ ಉದ್ಯೋಗಿ ಗಳಾಗಿದ್ದ ಅನಿವಾಸಿ ಭಾರತೀಯರು, ಅಲ್ಲಿನ ಕಾನೂನುಗಳಿಂದ ಎದುರಿಸಿದ ಸಮಸ್ಯೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ನೆರವಿನ ಮೂಲಕ ಅವರು ಸಮಸ್ಯೆಗಳಿಂದ ಮುಕ್ತರಾಗಲು ನಡೆಸಿದ ಹೋರಾಟದ ಕುರಿತು ಡಾ. ಶಾನುಬಾಗ್ ವಿವರಿಸಿದರು.

ಜಿಲ್ಲೆಯ ಶಿರೂರಿನ ಶಾಂತಾರಾಮ ಗಾಣಿಗ (1998), ಬ್ರಹ್ಮಾವರದ ಕೃಷ್ಣ ಪೂಜಾರಿ (2000), ಕೊಡಗು ಮೂಲದ ಜಮೀಲಾ (2003), ಪೌಲಿನ್ (2004), ಜಾರ್ಖಂಡ್‌ನಿಂದ ಬಂದು ಮಂಗಳೂರಿನಿಂದ ವಿದೇಶಕ್ಕೆ ಕಳುಹಿಸಲ್ಪಟ್ಟ ಸೋನಿಯಾ (2000), ಪಿ.ಪಿ.ರಾಜನ್ (1998), ಅಲೊಡ್ ಪಿರೇರಾ (2005), ರಾಜು (2004), ಜೆಸಿಂತಾ ಮೆಂಡೋನ್ಸಾ (2017), ಶಂಕರ ಪೂಜಾರಿ (2018) ಪ್ರಕರಣಗಳ ಹಿನ್ನೆಲೆಯನ್ನು ಅವರು ವಿವರಿಸಿದರು.

ವಿದೇಶಗಳಲ್ಲಿ ದುಡಿಯಲು ತೆರಳುವ ಜಿಲ್ಲೆಯ ಜನತೆ ವಿದೇಶಗಳಲ್ಲಿ ಎದುರಿ ಸಬಹುದಾದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರ ಮತ್ತು ಸರಕಾರದಿಂದ ಪಡೆಯಬಹುದಾದ ನೆರವು ಕುರಿತ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ, ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅರು ಹೇಳಿದರು.

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲ ಪೊ್ರ.ಪ್ರಕಾಶ್ ಕಣಿವೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News