ಹಿರಿಯ ನಾಗರೀಕರ ಸಂರಕ್ಷಣೆ ಆದೇಶ: ತ್ವರಿತ ಜಾರಿಗೆ ಸೂಚನೆ

Update: 2018-09-18 15:57 GMT

ಉಡುಪಿ, ಸೆ.18: ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯಿದೆ ಅಡಿಯಲ್ಲಿ ಹೊರಡಿಸಲಾಗುವ ಆದೇಶಗಳನ್ನು ಅಧಿಕಾರಿ ಗಳು ವಿಳಂಬವಿಲ್ಲದೆ ತ್ವರಿತವಾಗಿ ಜಾರಿಗೆ ತರಬೇಕು ಎಂದು ಕಾಯ್ದೆ ಯ ಉಡುಪಿ ಜಿಲ್ಲಾ ನ್ಯಾಯಮಂಡಳಿ ಅಧ್ಯಕ್ಷ ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಿರಿಯ ನಾಗರೀಕರ ರಕ್ಷಣಾ ಕಾಯಿದೆ- 2007ರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುವ ವೇಳೆ ಅವರು ಈ ಸೂಚನೆ ನೀಡಿದರು.

ಹಿರಿಯ ನಾಗರೀಕರ ರಕ್ಷಣಾ ಕಾಯಿದೆಯಡಿ ಆಯಾ ಉಪವಿಭಾಗದ ಉಪ ವಿಭಾಗಾಧಿಕಾರಿ(ಎ.ಸಿ)ಗಳ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿ ಇದ್ದು, ಇಲ್ಲಿಗೆ ಹಿರಿಯ ನಾಗರಿಕರು ಸಲ್ಲಿಸುವ ದೂರನ್ನು ಗರಿಷ್ಠ 90 ದಿನದೊಳಗೆ ಇತ್ಯರ್ಥ ಪಡಿಸಿ ಆದೇಶ ಹೊರಡಿಸಲಾಗುತ್ತದೆ. ಈ ಆದೇಶವನ್ನು ಜಾರಿಗೆ ತರಲು ಸಬ್ ರಿಜಿಸ್ಟ್ರಾರ್ ಅಥವಾ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯ ನಗರಸಭೆ ಅಥವಾ ಗ್ರಾಪಂಗಳಿಗೆ ಕಳುಹಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಆದೇಶ ಬಂದಾಗ ಯಾವುದೇ ವಿಳಂಭವಿಲ್ಲದೇ ಕೂಡಲೇ ಕಾರ್ಯಪ್ರವೃತ್ತ ರಾಗಬೇಕು ಎಂದು ಅವರು ತಿಳಿಸಿದರು.

ಪ್ರಸಕ್ತ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರ ಕಾಯಿದೆ ನ್ಯಾಯಮಂಡಳಿ ಯಲ್ಲಿ 23 ಪ್ರಕರಣಗಳು ಬಾಕಿ ಇವೆ. ಇವುಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲಾಗುವುದು.ಹಿರಿಯ ನಾಗರಿಕರ ಹೆಸರಿಗೆ ಆಸ್ತಿ ಹೆಸರು ವರ್ಗಾವಣೆಗೆ ಹೊರಡಿಸಿದ ಆದೇಶಗಳನ್ನು ಆಯಾ ಸಬ್‌ರಿಜಿಸ್ಟ್ರಾರ್‌ಗಳು ಗರಿಷ್ಠ ಒಂದು ವಾರದೊಳಗೆ ಜಾರಿಗೆ ತರಬೇಕು. ಇದಲ್ಲದೇ ನಗರಸಭೆ, ಗ್ರಾಪಂಗಳು ಖಾತಾ ಬದಲಾವಣೆಯನ್ನು ಕೂಡ 2-3 ದಿನಗಳಲ್ಲಿ ಹಿರಿಯ ನಾಗರಿಕರ ಹೆಸರಿಗೆ ಮಾಡಿಕೊಡಬೇಕು ಎಂದು ಉಪವಿಬಾಗಾಧಿಕಾರಿಗಳು ಸೂಚಿಸಿದರು.

ಹಿರಿಯ ನಾಗರಿಕರ ರಕ್ಷಣಾ ಕಾಯಿದೆಯ ಜಿಲ್ಲಾ ಸಂಧಾನಾಧಿಕಾರಿ ಡಾ. ರವೀಂದ್ರನಾಥ ಶಾನುಬೋಗ್ ಮಾತನಾಡಿ, ಈ ಕಾಯಿದೆಯಡಿ ಮಕ್ಕಳಿಂದ ನಿರ್ಲಕ್ಷಕ್ಕೊಳಗಾಗುವ ಪೋಷಕರು ಅಥವಾ ಮಕ್ಕಳ ಮೋಸದಿಂದ ಆಸ್ತಿಯನ್ನು ಕಳೆದುಕೊಂಡ ಹಿರಿಯ ನಾಗರಿಕರು ನೇರವಾಗಿ ಆಯಾ ಉಪವಿಭಾಗಾಧಿಕಾರಿ ಗಳಿಗೆ ದೂರು ನೀಡಬಹುದು. ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಉಪವಿಭಾಗಾಧಿಕಾರಿಗಳು ಇದರ ವಿಚಾರಣೆ ನಡೆಸಿ ಮಕ್ಕಳಿಂದ ಪೋಷಕರಿಗೆ ತಿಂಗಳಿಗೆ ಗರಿಷ್ಠ 10 ಸಾವಿರ ರೂ.ವರೆಗೆ ಜೀವನಾಂಶ ವೆಚ್ಚ ನೀಡಲು ಆದೇಶಿಸಬಹುದು ಎಂದರು.

ಇದಲ್ಲದೇ, ಮೋಸದಿಂದ ಪಾಲಕರ ಮನೆ ಅಥವಾ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಮಾಡಿಕೊಂಡಿದ್ದರೇ, ಅಂತಹ ಆಸ್ತಿಯನ್ನು ಮರಳಿ ಪಾಲಕರ ಹೆಸರಿಗೆ ವರ್ಗಾಯಿಸಲು ಸಬ್‌ರಿಜಿಸ್ಟ್ರಾರ್‌ಗೆ ಆದೇಶಿಸಲಾಗುತ್ತದೆ. ಅಲ್ಲದೇ, ಅಂತಹ ಮಕ್ಕಳನ್ನು ಪೊಲೀಸರ ನೆರವಿನಿಂದ ಮನೆಯಿಂದ ಹೊರಗೆ ಹಾಕಿ, ಆಸ್ತಿಯನ್ನು ಮರಳಿ ಪಾಲಕರ ವಶಕ್ಕೆ ನೀಡಬಹುದಾಗಿದೆ ಎಂದು ತಿಳಿಸಿದರು. ಇದಲ್ಲದೇ, ಹಿರಿಯ ನಾಗರಿಕರು ವೃದ್ಧಾಶ್ರಮಕ್ಕೆ ಸೇರಿಎದರೆ, ಅಲ್ಲಿನ ಖರ್ಚು ವೆಚ್ಚವನ್ನು ಮಕ್ಕಳಿಂದಲೇ ವಸೂಲು ಮಾಡಲು ಈ ಕಾಯಿದೆಯಲ್ಲಿ ಅವಕಾಶ ವಿದೆ ಎಂದು ಅವರು ತಿಳಿಸಿದರು.

ಹಿರಿಯ ನಾಗರಿಕರ ಆಸ್ತಿ ಬೇರೆಯವರಿಗೆ ಪರಭಾರೆ ಮಾಡಿ, ನೋಂದಣಿ ಮಾಡುವ ಸಂದರ್ಭದಲ್ಲಿ ಸಬ್‌ರಿಜಿಸ್ಟ್ರಾರ್‌ಗಳು ಬಹಳ ಎಚ್ಚರಿಕೆ ವಹಿಸಿ ನೋಂದಣಿ ಮಾಡಬೇಕು ಎಂದು ಅವರು ನೋಂದಣಿ ಇಲಾಖೆ ಅಧಿಕಾರಿ ಗಳಿಗೆ ಸಲಹೆ ಮಾಡಿದರು. ಪ್ರತೀ ಜಿಲ್ಲೆಯಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಈ ಕಾಯಿದೆಯ ನಿವಹರ್ಣಾಧಿಕಾರಿಗಳಾಗಿರುತ್ತಾರೆ ಎಂದರು.

ಕಾರ್ಯಾಗಾರದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News