‘ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಳಿವಿಗೆ ರೈತರು ಮುಂದೆ ಬನ್ನಿ'

Update: 2018-09-18 16:03 GMT

ಬ್ರಹ್ಮಾವರ, ಸೆ.18: 2004ರಲ್ಲಿ ಬಾಗಿಲು ಮುಚ್ಚಿರುವ ಕರಾವಳಿ ಕರ್ನಾಟಕದ ಏಕೈಕ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಸರಕಾರ ಸಿದ್ಧವಿದೆ ಎಂದು ಇತ್ತೀಚೆಗೆ ತಮ್ಮ ಉಡುಪಿಯ ಭೇಟಿಯ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಾರ್ಖಾನೆಯ ಮರು ಆರಂಭಕ್ಕೆ ಪ್ರಯತ್ನಗಳು ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಸರ್ವಸದಸ್ಯರ ಸಭೆ ಶುಕ್ರವಾರ ಬ್ರಹ್ಮಾವರದಲ್ಲಿ ನಡೆಯಲಿದ್ದು, ಇದರಲ್ಲಿ ಅಧಿಕ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮುಚ್ಚಿರುವ ಕಾರ್ಖಾನೆಯ ಪುನರಾರಂಭಕ್ಕೆ ತಮ್ಮ ಒಪ್ಪಿಗೆಯನ್ನು ನೀಡುವಂತೆ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಜಯಶೀಲ ಶೆಟ್ಟಿ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ರೈತರು ಸಾಕಷ್ಟು ಸಂಖ್ಯೆಯಲ್ಲಿ ಕಬ್ಬನ್ನು ಬೆಳೆದು ಕಾರ್ಖಾನೆಗೆ ನೀಡಲು ಸಿದ್ಧರಿದ್ದರೆ, ಸರಕಾರ ಕಾರ್ಖಾನೆಯ ಪುನಶ್ಚೇತನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಜಿಲ್ಲೆಯ ರೈತರು ಸಹ ಕಬ್ಬು ಬೆಳೆಯಲು ಉತ್ಸುಕರಾಗಿದ್ದಾರೆ ಎಂದು ರೈತ ಪ್ರತಿನಿಧಿಗಳು ಹೇಳುತ್ತಾರೆ.

1980ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಅದಕ್ಕೆ ಕಬ್ಬು ಪೂರೈಸುವ ಗುರಿಯೊಂದಿಗೆ ವಾರಾಹಿ ನೀರಾವರಿ ಯೋಜನೆಗೆ ಒಂದೇ ದಿನ ಶಿಲಾನ್ಯಾಸ ನೆರವೇರಿಸಿದ್ದರು. ಕಾರ್ಖಾನೆಯೇನೊ 1985ರಲ್ಲಿ ಕಾರ್ಯಾರಂಭ ಮಾಡಿದರೆ, ವಾರಾಹಿ ಯೋಜನೆಗೆ ಆರಂಭದಲ್ಲೇ ವಿಘ್ನಗಳು ಎದುರಾಗಿ ಈಗಲೂ ಕುಂಟುತ್ತಾ ಸಾಗಿದೆ. 2004ರಲ್ಲಿ ಕಾರ್ಖಾನೆ ನಷ್ಟದ ಕಾರಣದ ಮೇಲೆ ಬಾಗಿಲು ಹಾಕುವಾ ಗಲೂ ವಾರಾಹಿ ಯೋಜನೆಯಲ್ಲಿ ಹನಿ ನೀರು ರೈತರ ಗದ್ದೆಗಳಿಗೆ ಹರಿದಿರಲಿಲ್ಲ.

ಕೊನೆಗೂ 2010ರ ಸುಮಾರಿಗೆ ವಾರಾಹಿ ನೀರಾವರಿ ಯೋಜನಾ ಕಾಮಗಾರಿ ವೇಗ ಪಡೆದು ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಚುರುಕಾಗಿ ಸಾಗಿ 2015ರಲ್ಲಿ ಸುಮಾರು 4ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುವಂತಾಯಿತು. ಈ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕನಸು ಕಾಣತೊಡಗಿದ ಕಾರ್ಖಾನೆಯ ಆಡಳಿತ ಮಂಡಳಿ ಈ ದಿಶೆಯಲ್ಲಿ ತನ್ನ ಪ್ರಯತ್ನ ಸದ್ದಿಲ್ಲದೇ ನಡೆಸಿತ್ತು.

ಪುಣೆ ಮೂಲಕ ಖಾಸಗಿ ಸಂಸ್ಥೆಯಿಂದ ಕಾರ್ಖಾನೆ ಪುನಶ್ಚೇತನಕ್ಕೆ ಸಾಧ್ಯತಾ ವರದಿಯನ್ನು ಪಡೆದಿದ್ದು, ಇದಕ್ಕಾಗಿ ಸುಮಾರು 30 ಕೋಟಿ ರೂ.ಗಳ ನೆರವಿನ ನಿರೀಕ್ಷೆಯಲ್ಲಿದೆ. ಸರಕಾರದಿಂದ ಈ ನೆರವಿನ ಪ್ರಯತ್ನದಲ್ಲಿರುವ ಆಡಳಿತ ಮಂಡಳಿ ಅದು ತಪ್ಪಿದರೆ, ಕಾರ್ಖಾನೆಯ ಸುಮಾರು 10 ಎಕರೆ ಜಾಗವನ್ನು ಮಾರಿ ಬರುವ 30 ಕೋಟಿ ರೂ.ನಿಂದ ಕಾರ್ಖಾನೆಯ ಪುನರುಜ್ಜೀವನದ ಪ್ರಯತ್ನದಲ್ಲಿದೆ.

ಅಧ್ಯಕ್ಷರ ಹೇಳಿಕೆ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಜಯಶೀಲ ಶೆಟ್ಟಿ ಅವರು ಇಂದು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಜಿಲ್ಲೆಯ ರೈತರು ಕಬ್ಬು ಬೆಳೆಯಲು ಮುಂದೆ ಬರುವಂತೆ ಮನವಿ ಮಾಡಿದ್ದಾರೆ.

ವಾರಾಹಿ ನೀರಾವರಿ ಯೋಜನೆಯ ಕಾಮಗಾರಿ ಈಗಾಗಲೇ ಪ್ರಗತಿ ಯಲ್ಲಿದ್ದು, ವಾರಾಹಿ ಜಲ ವಿದ್ಯುತ್ ಯೋಜನೆಯ ಟೇಲ್ ರೇಸ್‌ನಿಂದ ಪ್ರತಿನಿತ್ಯ ಹೊರಬರುವ 1100 ಕ್ಯೂಸೆಕ್ಸ್ ನೀರನ್ನು ಉಪಯೋಗಿಸಿಕೊಂಡು ಕುಂದಾಪುರ ಮತ್ತು ಉಡುಪಿ ತಾಲೂಕುಗಳ ಒಟ್ಟು ಸುಮಾರು 38,800 ಎಕ್ರೆ ಕೃಷಿ ಜಮೀನಿಗೆ ನೀರಾವರಿ ಸೌಲ್ಯ ಒದಗಿಸುವ ಯೋಜನೆಯಾಗಿದೆ ಈ ವಾರಾಹಿ ಯೋಜನೆ ಪೂರ್ಣಗೊಂಡಾಗ ಎಡದಂಡೆ ಕಾಲುವೆಯ ಸುಮಾರು ಒಟ್ಟು 22,000 ಎಕ್ರೆ ಪ್ರದೇಶಕ್ಕೆ ನೀರಾವರಿ ಸೌಲ್ಯ ದೊರೆಯ ಲಿದ್ದು, ಇದರಲ್ಲಿ 15ರಿಂದ 18 ಸಾವಿರ ಎಕ್ರೆ ಜಮೀನಿನಲ್ಲಿ ಕಬ್ಬು ಬೆಳೆಯುವ ಸಾಧ್ಯತೆಗಳಿವೆ.

ರೈತರ ಕೃಷಿ ಜಮೀನಿಗೆ ನೀರು ಹರಿಯಲಾರಂಭಿಸಿರುವುದರಿಂದ ಹಾಗೂ ಕರಾವಳಿ ಭಾಗದ ವೈಪರೀತ್ಯ ಹವಾಮಾನದಿಂದಾಗಿ ಭತ್ತದ ಬೆಳೆಗಿಂತ ರೈತರಿಗೆ ಕಬ್ಬಿನ ಬೆಳೆಯು ಲಾಭದಾಯಕವಾಗಿದ್ದು, ರೈತರ ಹಿತದೃಷ್ಟಿಯಿಂದ ಬ್ರಹ್ಮಾವರ ದಲ್ಲಿರುವ ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಯನ್ನು ಸರಕಾರದ ಆರ್ಥಿಕ ನೆರವು ಪಡೆದು ಪುನಶ್ಚೇತನಗೊಳಿಸುವುದೆಂದು ಈ ಹಿಂದೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಇತ್ತೀಚೆಗೆ ಮುಖ್ಯಮಂತ್ರಿಗಳು ಸಹ ಕಾರ್ಖಾನೆ ಪುನಶ್ಚೇತನಕ್ಕೆ ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸಿದ್ದು, ರೈತರು ಹೆಚ್ಚು ಕಬ್ಬು ಬೆಳೆಸಿದರೆ ಮಾತ್ರ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವುದರಿಂದ ಪ್ರಯೋಜನವಾಗುವುದೆಂದು ತಿಳಿಸಿದ್ದಾರೆ. ಅಲ್ಲದೇ ರೈತರು ಕಬ್ಬು ಬೆಳೆಸುವಂತೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಸಹ ಕಾರ್ಖಾನೆ ಪುನಶ್ಚೇತನಕ್ಕೆ ಸಕಾರಾತ್ಮಕ ವಾಗಿ ಪ್ರತಿಕ್ರಿಯಿಸಿದ್ದು, ರೈತರು ಹೆಚ್ಚು ಕಬ್ಬು ಬೆಳೆಸಿದರೆ ಮಾತ್ರ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವುದರಿಂದ ಪ್ರಯೋಜನವಾಗುವುದೆಂದು ತಿಳಿಸಿದ್ದಾರೆ. ಅಲ್ಲದೇ ರೈತರು ಕಬ್ಬು ಬೆಳೆಸುವಂತೆ ಸಲಹೆ ನೀಡಿದ್ದಾರೆ.

ಆದುದರಿಂದ ಸಕ್ಕರೆ ಕಾರ್ಖಾನೆ ಕಾರ್ಯವ್ಯಾಪ್ತಿಯಲ್ಲಿರುವ ರೈತರು ವಾರಾಹಿ ನೀರಾವರಿ ಯೋಜನೆಯಿಂದ ನೀರಿನ ಸೌಲ್ಯ ಪಡೆಯುತ್ತಿರುವವರು ಮತ್ತು ಇನ್ನಿತರ ಮೂಲಗಳಿಂದ ನೀರಾವರಿ ಸೌಲ್ಯ ಹೊಂದಿರುವವರು ತಮ್ಮ ಜಮೀನಿನಲ್ಲಿ ಅತೀ ಹೆಚ್ಚು ಕಬ್ಬು ಬೆಳೆದು, ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಮತ್ತು ಸೆ.21ರಂದು ನಡೆಯಲಿರುವ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರ ಮಹಾಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂ.ಜಯಶೀಲ ಶೆಟ್ಟಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News