'ವಿಜಯ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಸರಕಾರ ನಿರ್ಧಾರ ಪ್ರಸ್ತಾಪ ಮುಂದುವರಿಸಿದರೆ ಉಪವಾಸ'

Update: 2018-09-19 12:56 GMT

ಮಂಗಳೂರು, ಸೆ.18: ವಿಜಯಾ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಗೌರವದ ಪ್ರತೀಕವಾಗಿದ್ದು, ಈ ಬ್ಯಾಂಕನ್ನು ಇತರ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಮುಂದುವರಿಸಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಕೂರುವುದಾಗಿ ವಿಧಾನ ಪರಿಷತ್ ಸಸ್ಯ ಐವನ್ ಡಿಸೋಜಾ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ ಶಾಖೆಯನ್ನು ಹೊಂದಿರುವ, ಬಡ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರ ಪಾಲಿನ ಆಶಾಕಿರಣವಾಗಿರುವ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್ ಜತೆ ವಿಲೀನಗೊಳಿಸುವ ಕೇಂದ್ರ ವಿತ್ತ ಸಚಿವಾಲಯ ತನ್ನ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

1931ರಲ್ಲಿ ಹುಟ್ಟಿದ ವಿಜಯಾಬ್ಯಾಂಕ್ ಪ್ರಪಂಚದ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. 2017-18ರಲ್ಲಿ ಲಾಭದಲ್ಲಿದ್ದ ಎರಡು ಬ್ಯಾಂಕ್‌ಗಳಲ್ಲಿ ವಿಜಯಾ ಬ್ಯಾಂಕ್ ಒಂದು. ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚು ಶಾಖೆಯನ್ನು ಹೊಂದಿರುವ ಬ್ಯಾಂಕ್ ಕೂಡಾ ಇದೇ ಆಗಿದ್ದು, ಇದನ್ನು ವಿಲೀನಗೊಳಿಸುವ ಪ್ರಕ್ರಿಯೆ ಕೇವಲ ಕಾರ್ಪೊರೇಟ್ ವಲಯಕ್ಕೆ ಸಹಕರಿಸುವ ಉದ್ದೇಶದಿಂದ ಕೂಡಿದೆ. ಇದನ್ನು ಕೇಂದ್ರ ಸರಕಾರ ಕೈಬಿಡಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದರು.

ವಿಜಯಬ್ಯಾಂಕ್‌ನ ಶೇ. 60ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. 2129 ಶಾಖೆಗಳನ್ನು ಹೊಂದಿರುವ ವಿಜಯಾಬ್ಯಾಂಕ್‌ನ 79 ಶಾಖೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಉಡುಪಿಯಲ್ಲಿ 63 ಸೇರಿ ಕರ್ನಾಟಕದಲ್ಲಿ ಒಟ್ಟು 583 ಶಾಖೆಗಳನ್ನು ವಿಜಯಾಬ್ಯಾಂಕ್ ಹೊಂದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀಕದ ಸಂಕೇತ. ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಈ ಬ್ಯಾಂಕ್‌ನ ವಿಲೀನಕ್ಕೆ ಕೇಂದ್ರ ಸರಕಾರ ಕೈ ಹಾಕಿದರೆ ಅದರ ಪರಿಣಾಮವನ್ನು ಎದುರಿಸಬೇಕಾುತ್ತದೆ ಎಂದು ಅವರು ಹೇಳಿದರು.

ಬ್ಯಾಂಕ್‌ಗಳ ಹೊರ ಬಾಕಿ ಸಾಲ (ಎನ್‌ಪಿಎ)ದ ಹೊರೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗಿರುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ವಿಜಯ ಮಲ್ಯ 9300 ಕೋಟಿ ರೂ., ನೀರವ್ ಮೋದಿ 13000 ಕೋಟಿ ರೂ. ಮುಳುಗಿಸಿ ಹೋಗಿದ್ದು, ಅವರಿಂದ ವಸೂಲು ಮಾಡುವ ಕೆಲಸವನ್ನು ಮೊದಲು ಕೇಂದ್ರ ಸರಕಾರ ಮಾಡಲಿ ಎಂದು ಅವರು ಹೇಳಿದರು.

ಬ್ಯಾಂಕ್‌ಗಳಿಗೆ ಬಾಕಿ ಇರುವ 8,50,000 ಕೋಟಿ ಎನ್‌ಪಿಎಯಲ್ಲಿ 5 ಲಕ್ಷ ಕೋಟಿ ಕಾರ್ಪೊರೇಟ್ ಕಂಪನಿಗಳದ್ದು. ಅವರ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಗ್ರಾಮೀಣ ಭಾಗದ ಜನರಿಗೆ ಸೇವೆ ನೀಡುವ ಬ್ಯಾಂಕ್‌ಗಳನ್ನು ವಿಲೀನಗೊಳಿಸುವುದಲ್ಲ ಎಂದು ಅವರು ಹೇಳಿದರು.

ಎಸ್‌ಬಿಐ ಜತೆ ಈ ಹಿಂದೆ ವಿಲೀನಗೊಂಡ ಬ್ಯಾಂಕ್‌ಗಳು ಲಾಭದಲ್ಲಿವೆಯೇ , ಅವುಗಳಿಂದ ಎನ್‌ಪಿಎ ವಸೂಲಾತಿ ಕಾರ್ಯ ಆಗಿದೆಯೇ ಎಂಬುದನ್ನು ಕೇಂದ್ರ ಸರಕಾರ ಜನತೆಗೆ ತಿಳಿಸಬೇಕು ಎಂದು ಹೇಳಿದ ಅವರು ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಪ್ರಸ್ತಾಪದ ಕುರಿತು ವಿಧಾನ ಪರಿಷತ್‌ನಲ್ಲಿ ತಾನು ಪ್ರಸ್ತಾಪಿಸುವುದಲ್ಲದೆ ಸಿಬ್ಬಂದಿಗಳನ್ನು ಒಳಗೊಂಡ ನಿಯೋಗವನ್ನು ದೇಶದ ಪ್ರಧಾನಿ ಹಾಗೂ ಹಣಕಾಸು ಸಚಿವ ಬಳಿಗೆ ಒಯ್ಯುವುದಾಗಿಯೂ ತಿಳಿಸಿದರು.
ಬಿಜೆಪಿಯವರಿಗೆ ನಿರಾಶೆ

ರಾಜ್ಯ ಸರಕಾರ ಸದೃಢವಾಗಿದ್ದು, ಬಿಜೆಪಿಯವರಿಗೆ ನಿರಾಶೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಪಕ್ಷದ ಶಾಸಕರನ್ನು ಐದು ದಿನಗಳವರೆಗೆ ವಾಸ್ತವ್ಯಕ್ಕೆ ಸಾಕಾಗುವಷ್ಟು ಸರಂಜಾಮುಗಳೊಂದಿಗೆ ಬೆಂಗಳೂರಿಗೆ ಬರಲು ಬುಲಾವ್ ನೀಡಿದ್ದಾರೆ. ಬಿಜೆಪಿಯ ಯಾವುದೇ ಕುತಂತ್ರವೂ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಐವನ್ ಡಿಸೋಜಾ ಬಿಜೆಪಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

ಗೋಷ್ಠಿಯಲ್ಲಿ ಉಪ ಮೇಯರ್ ಮುಹಮ್ಮದ್ ಕೆ., ನಾಗೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News