ಸೆ.21-23: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾದೇಶಿಕ ಚಲನಚಿತ್ರೋತ್ಸವ

Update: 2018-09-19 12:58 GMT

ಮಂಗಳೂರು, ಸೆ.19: ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸೆ. 21ರಿಂದ 23ರವರೆಗೆ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಪ್ರಾದೇಶಿಕ ಚಲನ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಚಿತ್ರೋತ್ಸವದ ಸಂಚಾಲಕ ಡಾ. ನಾ. ದಾಮೋದರ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತುಳು, ಕೊಂಕಣಿ, ಕೊಡವ, ಬಂಜಾರ ಹಾಗೂ ಬ್ಯಾರಿ ಭಾಷೆಗಳ ಐದು ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳು ಹಾಗೂ ಮೂರು ತುಳು ಜನಪ್ರಿಯ ಚಿತ್ರಗಳು ಪ್ರದರ್ಶಿಸಲ್ಪಡಲಿವೆ ಎಂದರು.

ಮೂರು ದಿನಗಳಲ್ಲಿ ಚಲನಚಿತ್ರಗಳ ಪ್ರದರ್ಶನದ ಜತೆಗೆ ಆಯಾ ಚಿತ್ರದ ನಿರ್ದೇಶಕರ ಜತೆ ಸಂವಾದವನ್ನು ಆಯೋಜಿಸಲಾಗಿದೆ. ಚಿತ್ರ ಅಕಾಡೆಮಿಯ ಅಧ್ಯಕ್ಷ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಇತರ ಚಲನಚಿತ್ರ ಕಲಾವಿದರೂ ಭಾಗವಹಿಸಲಿದ್ದಾರೆ.

ಕನ್ನಡದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ (ನಿರ್ದೇಶಕ- ಋಷಭ್ ಶೆಟ್ಟಿ), ತುಳುವಿನ ‘ಪಡ್ಡಾಯಿ’ (ನಿ- ಅಭಯಸಿಂಹ), ಕೊಡವ ಭಾಷೆಯ ‘ತಳಂಘ್ ನೀರ್’ (ನಿ. ಕಾಸರಗೋಡು ಚಿನ್ನಾ), ಬ್ಯಾರಿ ಭಾಷೆಯ ‘ಬ್ಯಾರಿ’ (ನಿ- ಸುವೀರನ್) ತುಳುವಿನ ‘ಬಂಗಾರ ಪಟ್ಲೇರ್’ (ನಿ- ರಿಚ್ಚರ್ಡ್ ಕ್ಯಾಸ್ತಲಿನೊ), ‘ಒರಿಯರ್ದೊರಿ ಅಸಲ್’ (ನಿ- ವಿಜಯ ಕುಮಾರ್ ಕೊಡಿಯಲ್‌ಬೈಲ್), ‘ಚಾಲಿಪೋಲಿಲು’ (ನಿ- ವೀರೇಂದ್ರ ಶೆಟ್ಟಿ) ಈ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಅವರು ವಿವರಿಸಿದರು.

ಸೆ. 21ರಂದ ಚಲನಚಿತ್ರೋತ್ಸವನ್ನು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸುವರು. ನಿರ್ದೇಶಕರಾದ ಋಷಭ್ ಶೆಟ್ಟಿ ಹಾಗೂ ಶಿವಧ್ವಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ನಾ. ದಾಮೋದರ ಶೆಟ್ಟಿ ತಿಳಿಸಿದರು.

ಆಸಕ್ತ ಸಾರ್ವಜನಿಕರು ಪೂರ್ವಭಾವಿಯಾಗಿ 9448000478, 8618361841 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.
ಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸರಸ್ವತಿ ಕಮಾರಿ, ಚಂದ್ರಕಲಾ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News