ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ಪಾತ್ರ ಪ್ರಮುಖ: ಅಭಿನಂದನ್ ಶೆಟ್ಟಿ

Update: 2018-09-19 14:33 GMT

ಉಡುಪಿ, ಸೆ.19: ಯುವ ಜನಾಂಗ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಯುವ ಜನತೆಗೆ ಸೇವಾ ಕಾರ್ಯ ಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡುತ್ತದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದ್ದಾರೆ.

ರೋಟರಿ ಅಂಬಲಪಾಡಿ ಹಾಗೂ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಯೂತ್ ರೆಡ್‌ಕ್ರಾಸ್ ಕಮಿಟಿಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾದ ಯುವಜನತೆ ಮತ್ತು ರೋಟರಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಭವಿಷ್ಯದಲ್ಲಿ ವೈದ್ಯರಾಗಲು ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಈ ಬಗ್ಗೆ ಈಗಾಗಲೇ ಯೋಚಿಸಬೇಕು ಎಂದರು. ಈ ಸಂದರ್ಭದಲ್ಲಿ ಅವರು ರೋಟರಿ ಸಂಸ್ಥೆಯ ಧ್ಯೇಯ ಉದ್ದೇಶಗಳು ಹಾಗೂ ಸೇವಾ ಯೋಜನೆಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಶಾಲಕ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್ ರಾಮಚಂದ್ರ ವಹಿಸಿದ್ದರು.
ಎಸ್‌ಡಿಎಂ ಕಾಲೇಜಿನ ಯೂತ್ ರೆಡ್‌ಕ್ರಾಸ್ ಕಮಿಟಿಯ ಕಾರ್ಯಕ್ರಮ ನಿರ್ದೇಶಕ ಡಾ.ಸುಧೀಂದ್ರ ಹೋನ್ವಾಡ್ ಸ್ವಾಗತಿಸಿದರು. ಸಂಚಾಲಕ ಡಾ. ಮಹಮ್ಮದ್ ಫೈಸಲ್ ಪ್ರಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಂಬಲ ಪಾಡಿ ಅಧ್ಯಕ್ಷ ಖಲೀಲ್ ಅಹ್ಮದ್ ವಂದಿಸಿದರು. ಡಾ.ನಿಯತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News