ಸೆ. 26: ಅಕ್ರಮ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಪಾದಯಾತ್ರೆ

Update: 2018-09-19 15:02 GMT

ಮಂಗಳೂರು, ಸೆ.19: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟಗಳ ನಡುವೆಯೂ ಸುರತ್ಕಲ್ ಎನ್‌ಐಟಿಕೆ ಸಮೀಪವಿರುವ ಅಕ್ರಮ ಟೋಲ್ಗೇಟನ್ನು ಮುಚ್ಚಬೇಕು ಮತ್ತು ಹೆದ್ದಾರಿಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸೆ.26ರಂದು ಕೂಳೂರಿನಿಂದ ಸುರತ್ಕಲ್‌ಗೆ ಪಾದಯಾತ್ರೆ ನಡೆಯಲಿದೆ ಎಂದು ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅಂದು ಬೆಳಗ್ಗೆ 9:30ಕ್ಕೆ ಕೂಳೂರು ಜಂಕ್ಷನ್‌ನಲ್ಲಿ ಪಾದಯಾತ್ರೆಗೆ ಚಾಲನೆ ದೊರಕಲಿದೆ. ಮಧ್ಯಾಹ್ನ 1:30ಕ್ಕೆ ಟೋಲ್ಗೇಟ್ ಬಳಿಪ್ರತಿಭಟನಾ ಸಭೆ ನಡೆಯಲಿದೆ. ಬೇಡಿಕೆ ಈಡೇರುವವರೆಗೂ ವಿವಿಧ ಹಂತಗಳಲ್ಲಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.

ಟೋಲ್‌ಗೇಟ್ ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿವೆ. 10 ಕಿ.ಮೀ. ಅಂತರದ ಹೆಜಮಾಡಿಯ ಟೋಲ್ ಕೇಂದ್ರ ಆರಂಭಗೊಂಡ ನಂತರ ಮುಚ್ಚಲಾಗುವುದು ಎಂಬ ಭರವಸೆಯೊಂದಿಗೆ 2 ವರ್ಷದ ಹಿಂದೆ ಸುರತ್ಕಲ್ನಲ್ಲಿ ಸುಂಕ ವಸೂಲಿ ಆರಂಭಿಸಲಾಗಿತ್ತು. ಈಗ ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾಚರಣೆ ಆರಂಭಿಸಿ ಎರಡು ವರ್ಷ ಕಳೆದಿದೆ. ಆದರೆ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ವಸೂಲಿಯನ್ನು ಎಲ್ಲಾ ವಿರೋಧಗಳ ನಡುವೆಯೂ ಅಕ್ರಮವಾಗಿ ಮುಂದುವರಿಸಲಾಗಿದೆ. ಈ ಅಕ್ರಮ ಟೋಲ್ ಸಂಗ್ರಹ, ಹೆದ್ದಾರಿ ದುರವಸ್ಥೆಯ ವಿರುದ್ಧ ಒಂದು ವರ್ಷದಿಂದ ‘ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್’ ಸ್ಥಳೀಯ ನಾಗರಿಕರ ಬೆಂಬಲದೊಂದಿಗೆ ಸತತ ಹೋರಾಟ ನಡೆಸುತ್ತಿದೆ. ಆದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ರಾಜ್ಯ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಕಚೇರಿಯು ಈ ಬಾರಿಯ ಟೋಲ್ ಸಂಗ್ರಹದ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಬಹುದು ಎಂಬ ಪ್ರಸ್ತಾಪವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿತ್ತು. ಅದರಂತೆ ಜುಲೈ 30ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳ್ಳಬೇಕಿತ್ತು. ಇದಕ್ಕೆ ಪೂರಕವಾಗಿ ಜುಲೈಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಗುತ್ತಿಗೆ ಅವಧಿ ಮುಗಿದ ನಂತರ ಯಾವುದೆ ಕಾರಣಕ್ಕೂ ಟೋಲ್ ಸಂಗ್ರಹ ಮುಂದುವರಿಯುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡಿದ್ದರು. ಈ ಭರವಸೆಯೂ ಸುಳ್ಳಾಗಿದ್ದು, ರಾಜ್ಯ ಸರಕಾರದ ಪ್ರಸ್ತಾಪಕ್ಕೆ ವಿರುದ್ಧವಾಗಿ ಟೋಲ್ ಸಂಗ್ರಹದ ಗುತ್ತಿಗೆಯನ್ನು ಮತ್ತೊಂದು ಅವಧಿಗೆ ನಿಯಮಗಳಿಗೆ ವಿರುದ್ಧವಾಗಿ ನವೀಕರಿಸಲಾಗಿದೆ. ಈ ಅಕ್ರಮ ನವೀಕರಣದ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಹೋರಾಟ ಮಾಡುತ್ತಿದ್ದರೂ ಸಂಸದರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಂಸದರ ಇಂತಹ ಜನವಿರೋಧಿ, ನಿಯಮ ವಿರೋಧಿ ನಡೆಯನ್ನು ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ಯು ಖಂಡಿಸುತ್ತದೆ ಎಂದರು.

ಟೋಲ್ ಕೇಂದ್ರಗಳ ನಡುವಿನ ಅಂತರ ಕನಿಷ್ಟ 40 ಕಿಮೀ ಇರಬೇಕು ಎಂಬ ನಿಯಮವಲ್ಲದೆ ಸುರತ್ಕಲ್-ನಂತೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಾಗಿಲ್ಲ. ಟೋಲ್ ಸಂಗ್ರಹದ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಗುಂಡಿಗಳು ಇರಬಾರದು. ಗುಂಡಿಗಳು ಬಿದ್ದಲ್ಲಿ 48 ಗಂಟೆಗಳ ಅವಧಿಯಲ್ಲಿ ಮುಚ್ಚಬೇಕು ಎಂಬ ನಿಯಮವನ್ನೂ ಇಲ್ಲಿ ಉಲ್ಲಂಘಿಸಲಾಗಿದೆ. ಕೊಟ್ಟಾರ ಚೌಕಿಯಿಂದ ಸುರತ್ಕಲ್ವರೆಗಿನ ರಸ್ತೆ ಸಂಚಾರ ಅಪಾಯಕಾರಿಯಾಗಿದೆ. ಕೂಳೂರು ಸೇತುವೆಯಲ್ಲಂತೂ ಅವೈಜ್ಞಾನಿಕವಾಗಿ ಹಾಕಿರುವ ತೇಪೆಗಳಿಂದ ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ತಲುಪಿದ್ದು ದಿನವಿಡೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆ ನಿರ್ವಹಣೆಯ ಗುತ್ತಿಗೆ ಪಡೆದು ವರ್ಷಕ್ಕೆ ಕೋಟ್ಯಾಂತರ ರೂಪಾಯಿಯನ್ನು ಪಡೆಯುವ ಗುತ್ತಿಗೆ ಕಂಪೆನಿಯು ಅತ್ಯಂತ ಕಳಪೆ ನಿರ್ವಹಣೆ ತೋರುತ್ತಿದೆ. ಇದಕ್ಕೆ ಸಂಸದರು ಮತ್ತು ಗುತ್ತಿಗೆ ಕಂಪೆನಿಯ ಮಧ್ಯೆ ನಡೆದಿರುವ ಅಪವಿತ್ರ ಒಪ್ಪಂದವೇ ಕಾರಣ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಆ ಹಿನ್ನೆಲೆಯಲ್ಲಿ ಸುರತ್ಕಲ್‌ನ ಅಕ್ರಮ ಟೋಲ್ ಕೇಂದ್ರವನ್ನು ತಕ್ಷಣ ಮುಚ್ಚಬೇಕು, ಸರ್ವಿಸ್ ರಸ್ತೆಗಳ ನಿರ್ಮಾಣ ಕೈಗೆತ್ತಿಕೊಂಡು ಕಾಲಮಿತಿಯೊಳಗಡೆ ಪೂರ್ಣಗೊಳಿಸಬೇಕು, ಹೆದ್ದಾರಿ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿಯ ಮೂಲಕ ಮುಚ್ಚಬೇಕು, ಭ್ರಷ್ಟ ರಸ್ತೆ ನಿರ್ವಹಣಾ ಗುತ್ತಿಗೆ ಕಂಪೆನಿಯ ಮೇಲೆ ಕ್ರಮಕೈಗೊಳ್ಳಬೇಕು, ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಇತ್ಯಾದಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸ್ಥಳೀಯ ಸಂಘಸಂಸ್ಥೆಗಳ ಪಾದಯಾತ್ರೆ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ರಾಘವೇಂದ್ರ ರಾವ್, ಲಾರಿ ಮಾಲಕರ ಸಂಘದ ಮುಖಂಡ ಕೆ.ಯು.ಮೂಸಬ್ಬ ಪಕ್ಷಿಕೆರೆ, ಕುಳಾಯಿ ನಾಗರಿಕ ಸಮಿತಿಯ ಅಧ್ಯಕ್ಷ ಭರತ್ ಶೆಟ್ಟಿ ಕುಳಾಯಿ, ರಾಜೇಶ್ ಶೆಟ್ಟಿ ಪಡ್ರೆ, ರಹೀಂ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News