ಸೆ.21: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

Update: 2018-09-19 14:47 GMT

ಉಡುಪಿ, ಸೆ.19: ಇದೀಗ ಸ್ಥಗಿತಗೊಂಡಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.21ರ ಶುಕ್ರವಾರ ನಡೆಯಲಿದ್ದು, ಇದರಲ್ಲಿ ಕರಾವಳಿ ಭಾಗದ ರೈತ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಜಯಶೀಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರಾಹಿ ನೀರಾವರಿ ಯೋಜನೆಯ ಕಾಮಗಾರಿ ಈಗಾಗಲೇ ಪ್ರಗತಿ ಯಲ್ಲಿದ್ದು, ವಾರಾಹಿ ಜಲ ವಿದ್ಯುತ್ ಯೋಜನೆಯ ಟೇಲ್ ರೇಸ್‌ನಿಂದ ಪ್ರತಿನಿತ್ಯ ಹೊರಬರುವ 1100 ಕ್ಯೂಸೆಕ್ಸ್ ನೀರನ್ನು ಉಪಯೋಗಿಸಿಕೊಂಡು ಕುಂದಾಪುರ ಮತ್ತು ಉಡುಪಿ ತಾಲೂಕುಗಳ ಒಟ್ಟು ಸುಮಾರು 38,800 ಎಕ್ರೆ ಕೃಷಿ ಜಮೀನಿಗೆ ನೀರಾವರಿ ಸೌಲ್ಯ ಒದಗಿಸುವ ಯೋಜನೆ ಇದಾಗಿದೆ. ವಾರಾಹಿ ಯೋಜನೆ ಪೂರ್ಣಗೊಂಡಾಗ ಎಡದಂಡೆ ಕಾಲುವೆಯ ಸುಮಾರು ಒಟ್ಟು 22,000 ಎಕ್ರೆ ಪ್ರದೇಶಕ್ಕೆ ನೀರಾವರಿ ಸೌಲ್ಯ ದೊರೆಕಲಿದ್ದು, ಇದರಲ್ಲಿ 15ರಿಂದ 18 ಸಾವಿರ ಎಕ್ರೆ ಜಮೀನಿನಲ್ಲಿ ಕಬ್ಬು ಬೆಳೆಯುವ ಸಾಧ್ಯತೆಗಳಿವೆ.
ಕರಾವಳಿ ಭಾಗದ ಹವಾಮಾನ ವೈಪರಿತ್ಯದಿಂದಾಗಿ ಇಲ್ಲಿ ಭತ್ತ ಬೆಳೆಗಿಂತ ಕಬ್ಬಿನ ಬೆಳೆಯು ರೈತರಿಗೆ ಹೆಚ್ಚು ಲಾಭದಾಯಕವಾಗಿದೆ. ರೈತರ ಹಿತ ದೃಷ್ಟಿಯಿಂದ ಬ್ರಹ್ಮಾವರದ ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಯನ್ನು ಸರಕಾರದ ಆರ್ಥಿಕ ನೆರವು ಪಡೆದು ಪುನಶ್ಚೇತನಗೊಳಿಸುವ ಬಗ್ಗೆ ಈ ಹಿಂದೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

 ಇತ್ತೀಚೆಗೆ ಮುಖ್ಯಮಂತ್ರಿಗಳು ಸಹ ಕಾರ್ಖಾನೆ ಪುನಶ್ಚೇತನಕ್ಕೆ ಸಕಾರಾತ್ಮಕ ವಾಗಿ ಸ್ಪಂಧಿಸಿದ್ದು, ರೈತರು ಹೆಚ್ಚು ಕಬ್ಬು ಬೆಳೆಸಿದರೆ ಮಾತ್ರ ಸಕ್ಕರೆ ಕಾರ್ಖಾನೆಯ ಪುನರಾರಂಭ ಸಾಧ್ಯವೆಂದು ತಿಳಿಸಿದ್ದಾರೆ. ಈಗಾಗಲೇ ವಾರಾಹಿ ಯೋಜನಾ ಪ್ರದೇಶದ ರೈತರ ಜಮೀನಿಗೆ ನೀರು ಹರಿಯಲು ಆರಂಭಿಸಿದ್ದು, ಈ ಭಾಗದ ರೈತರು ಹೆಚ್ಚು ಹೆಚ್ಚು ಕಬ್ಬು ಬೆಳೆಯಲು ಪ್ರಾರಂಭಿಸಿದರೆ ಮಾತ್ರ ಕಾರ್ಖಾನೆಯ ಪುನಶ್ಚೇತನ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಆದುದರಿಂದ ಸಕ್ಕರೆ ಕಾರ್ಖಾನೆ ಕಾರ್ಯವ್ಯಾಪ್ತಿಯಲ್ಲಿರುವ ರೈತರು, ವಾರಾಹಿ ನೀರಾವರಿ ಯೋಜನೆಯಿಂದ ನೀರಿನ ಸೌಲ್ಯ ಪಡೆಯುತ್ತಿರುವವರು ಮತ್ತು ಇನ್ನಿತರ ಮೂಲಗಳಿಂದ ನೀರಾವರಿ ಸೌಲಭ್ಯ ಹೊಂದಿರುವವರು ತಮ್ಮ ಜಮೀನಿನಲ್ಲಿ ಅತೀ ಹೆಚ್ಚು ಕಬ್ಬು ಬೆಳೆದು, ಸಕ್ಕರೆ ಕಾರ್ಖಾನೆಯನ್ನು ಉಳಿಸುವಂತೆ ಮತ್ತು ಸೆ.21ರಂದು ನಡೆಯಲಿರುವ ಸಕ್ಕರೆ ಕಾರ್ಖಾನೆಯ ಸರ್ವ ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸುವಂತೆ ಜಯಶೀಲ ಶೆಟ್ಟಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News