ಅಂತಾರಾಷ್ಟ್ರೀಯ ಅಗ್ನಿಶಾಮಕ ಕ್ರೀಡಾಕೂಟ ವಿಜೇತರಿಗೆ ಸನ್ಮಾನ

Update: 2018-09-19 15:19 GMT

ಮಂಗಳೂರು, ಸೆ.19: ದಕ್ಷಿಣ ಕೊರಿಯಾದ ಚಿಂಗ್‌ಜುನಲ್ಲಿ ಸೆ. 9ರಿಂದ 17ರವರೆಗೆ ನಡೆದ ಅಂತಾರಾಷ್ಟ್ರೀಯ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಪದಕ ಜಯಿಸಿದ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿಗಳಾದ ರಾಜೇಶ್ ಕೆ. ಮಡಿವಾಳ ಹಾಗೂ ಅಶ್ವಿನ್ ಸನಿಲ್‌ರನ್ನು ನಗರದ ಅಗ್ನಿಶಾಮಕ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ನಿರ್ದೇಶಕ ಎಚ್.ಎಸ್. ವರದರಾಜನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದು, ಪದಕ ವಿಜೇತ ಕ್ರೀಡಾಪಟುಗಳಿಗೆ ಶಾಲು, ಹೂ ಹಾರ ಪೇಟ ಹಣ್ಣುಹಂಪಲು ನೀಡಿ ಅಭಿನಂದಿಸಲಾಯಿತು.

ಅಂತಾರಾಷ್ಟ್ರೀಯ ಅಗ್ನಿಶಾಮಕ 13ನೆ ಕ್ರೀಡಾಕೂಟದಲ್ಲ್ಲಿ ಅಶ್ವಿನ್ ಸನಿಲ್‌ರವರು 100 ಮೀಟರ್ ಓಟದಲ್ಲಿ 4ನೆ ಸ್ಥಾನ ಹಾಗೂ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ರಾಜೇಶ್ ಕೆ. ಮಡಿವಾಳ ಅವರು ಬೆಂಚ್‌ಪ್ರೆಸ್‌ನ 135 ಕೆಜಿ ವಿಭಾಗದಲ್ಲಿ ಹಾಗೂ ಪವರ್ ಲಿಫ್ಟಿಂಗ್‌ನ 435 ಕೆಜಿ ವಿಭಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶ್ವಿನ್ ಸನಿಲ್, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇದೇ ಪ್ರಥಮ ಬಾರಿಗೆ ಸ್ಪರ್ಧಿಸಿದ್ದು, ಆರಂಭದ ಎರಡು ದಿನ ವಿದೇಶದಲ್ಲಿ ಆಹಾರ ಸಮಸ್ಯೆ ಎದುರಾಯಿತು ಎಂದರು.

ಪದಕ ಜಯಿಸಿ ಬಂದ ತಮಗೆ ಇಲಾಖೆಯ ವತಿಯಿಂದ ನೀಡಿದ ಪ್ರೋತ್ಸಾಹದಿಂದ ಇನ್ನೂ ಹೆಚ್ಚಿನ ಸಾಧನೆಗೆ ಹುಮ್ಮಸ್ಸು ನೀಡಿದೆ ಎಂದರು.

ದೇಶದ 15 ಪದಕಗಳಲ್ಲಿ 3 ಕರ್ನಾಟಕಕ್ಕೆ

ದಕ್ಷಿಣ ಕೊರಿಯಾದ ಚಿಂಗ್‌ಜುನಲ್ಲಿ ನಡೆದ ಕ್ರೀಡಾಕೂಟದಲ್ಲಿ ದೇಶಕ್ಕೆ 15 ಪದಕಗಳು ಲಭ್ಯವಾಗಿದ್ದು, ಅದರಲ್ಲಿ ಮೂರು ಪದಕಗಳನ್ನು ಕರ್ನಾಟಕ ಪಡೆದುಕೊಂಡಿದೆ. ಆ ಮೂರು ಪದಕಗಳು ಕರ್ನಾಟಕದ ಮಂಗಳೂರು ಪ್ರಾಂತದ ಅಗ್ನಿಶಾಮಕ ಸಿಬ್ಬಂದಿಗಳು ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ನಿರ್ದೇಶಕ ಎಚ್.ಎಸ್. ವರದರಾಜನ್ ಸನ್ಮಾನ ನೆರವೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಗಪುರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ರಾಜೇಶ್ ಹಾಗೂ ಅಶ್ವಿನ್ ಸನಿಲ್‌ರವರು ಪದಕ ಜಯಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದ ಬಳಿಕವಷ್ಟೆ ಅವರನ್ನು ಸ್ಪರ್ಧೆಗೆ ಕಳುಹಿಸಲು ತೀರ್ಮಾನಿಸಿ ತಯಾರಿ ನಡೆಸಲಾಯಿತು. ಈವರೆಗೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕರ್ನಾಟಕ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಗೆ ದೊರಕಿರಲಿಲ್ಲ. ಈ ಬಾರಿಯ ಯಶಸ್ಸು ಮುಂದೆ ಇನ್ನಷ್ಟು ಕ್ರೀಡಾ ಪ್ರತಿಭೆಗಳನ್ನು ಕ್ರೀಡಾಕೂಟಕ್ಕೆ ಕಳುಹಿಸಲು ಹಾಗೂ ಪದಕಗಳನ್ನು ಜಯಿಸಲು ಪ್ರೇರಣೆ ನೀಡಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ಉಡುಪಿಯ ಜಿಲ್ಲಾ ಅಗ್ನಿಶಾಮಕ ಅಧಿಾರಿ ವಸಂತ ಕುಮಾರ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News