ಸ್ವಚ್ಛ ಭಾರತ ಸಮ್ಮರ್ ಇಂಟರ್ನ್‌ಶಿಪ್ ಯೋಜನೆ: ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿಗೆ ಅಗ್ರ ಪ್ರಶಸ್ತಿ

Update: 2018-09-19 16:41 GMT

ಉಡುಪಿ, ಸೆ.19: ಕೇಂದ್ರ ಸರಕಾರದ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್‌ಶಿಪ್ ಯೋಜನೆಯ ಭಾಗವಾಗಿ ಕಳೆದ 3 ತಿಂಗಳ(ಮೇ1ರಿಂದ ಜು.31ರ ಅವಧಿ) ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಚೇರ್ಕಾಡಿ ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿ ಅಗ್ರ ಪ್ರಶಸ್ತಿಗೆ ಆಯ್ಕೆಯಾ ಗಿದೆ ಎಂದು ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕರು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಗೊಂಡ ಯುವಕ/ಯುವತಿ ಮಂಡಳಗಳ ನಡುವೆ ರಾಜ್ಯ ಮಟ್ಟದ ಸ್ಪರ್ಧೆ ನಡೆದಿದ್ದು, ಇದರಲ್ಲಿ ರಾಜ್ಯ ಮಟ್ಟದ ಆಯ್ಕೆ ಮಂಡಳಿ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿಯನ್ನು ರಾಜ್ಯದಲ್ಲಿ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿ 100 ಗಂಟೆಗೂ ಅಧಿಕ ಶ್ರಮದಾನ ಮಾಡಿದ್ದಲ್ಲದೇ, ಜಿಲ್ಲೆಯ ಹಲವು ಕಡೆಗಳಲ್ಲಿ ಸ್ವಯಂ ಸೇವೆಯನ್ನು ಈ ತಂಡ ನಡೆಸಿದ್ದು, ಇದು ಸ್ಥಳೀಯರ ಹಾಗೂ ಜಿಲ್ಲಾ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾಧಿಕಾರಿ ಹಾಗೂ ಹಲವಾರು ಜನಪ್ರತಿನಿಧಿಗಳು ಸಮೃದ್ಧಿ ಮಹಿಳಾ ಮಂಡಳಿಯ ಈ ಜನಪರ ಸಮಾಜಮುಖಿ ಸೇವೆಯನ್ನು ಪ್ರಶಂಸಿದ್ದಾರೆ ಎಂದು ನೆಹರು ಯುವಕೇಂದ್ರದ ತಿಳಿಸಿದೆ.

ರಾಜ್ಯ ಮಟ್ಟದಲ್ಲಿ ಈ ಮಹಿಳಾ ಸಂಘಕ್ಕೆ ರಾಜ್ಯ ಪ್ರಶಸ್ತಿ ಹಾಗೂ ಪ್ರಥಮ ಬಹುಮಾನವಾಗಿ 50,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ರಾಜ್ಯ ಮಟ್ಟದ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಸದ್ಯವೇ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಥಮ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್‌ಶಿಪ್ ಯೋಜನೆಯಡಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಹಲವು ಸವಾಲುಗಳ ನಡುವೆಯೂ ಶನಿವಾರ ಮತ್ತು ರವಿವಾರಗಳಂದು ಸ್ವಯಂ ಸೇವಾ ಕಾರ್ಯಗಳ ಮೂಲಕ ಸ್ವಚ್ಛ ಬಾರತ ಅಭಿಯಾನದ ಅರಿವು ಮೂಡಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿತ್ತು.

ಸಮೃದ್ಧಿ ಮಹಿಳಾ ಮಂಡಳಿಯ ನೇತೃತ್ವ ವಹಿಸಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ ಪ್ರಸನ್ನ ಪಿ. ಭಟ್ ತಮ್ಮ ತಂಡಕ್ಕೆ ರಾಜ್ಯದ ಅಗ್ರಪ್ರಶಸ್ತಿ ದೊರೆತಿರುವುದಕ್ಕೆ ಅತೀವ ಹರ್ಷ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಇನ್ನು ಮುಂದೆ ಕೂಡ ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಗ್ರಾಮ ಮಟ್ಟದಲ್ಲಿ ತಮ್ಮ ತಂಡ ಕಾರ್ಯ ಪ್ರವೃತ್ತವಾಗುವುದು ಎಂದರು.

ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಯಾದ ವಿಲ್ಫ್ರೆಡ್ ಡಿಸೋಜ ಅವರು ಜಿಲ್ಲಾ ನೋಡಲ್ ಅಧಿಕಾರಿಯಾಗಿ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದಲ್ಲದೇ ಸಮಯಕ್ಕೆ ಸರಿಯಾಗಿ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಹಲವಾರು ಯೋಜನೆಗಳ ಅರಿವು ಹಾಗೂ ಜನಪರ ಕಾರ್ಯ್ರಮ ರೂಪಿಸಲು ಸಲಹೆ ನೀಡಿದ್ದರು.

ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ:  ಇದೀಗ ರಾಷ್ಟ್ರ ಮಟ್ಟ/ಅಂತಿಮ ಘಟ್ಟದ ಆಯ್ಕೆ ಪ್ರಕ್ರಿಯೆ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ನೇತೃತ್ವದಲ್ಲಿ ನಡೆಯಲಿದೆ. ಇದರಲ್ಲಿ ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ.

ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ವಚ್ಛಬಾರತ ಸಮ್ಮರ್ ಇಂಟರ್ನ್‌ಶಿಪ್ ಯೋಜನೆಯ ವಿಜೇತ ತಂಡವು ಅ.2ರಂದು ನಡೆಯುವ ಗಾಂಧಿ ಜಯಂತಿ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಪತ್ರ ಹಾಗೂ 2 ಲಕ್ಷ ರೂ. ನಗದು ಬಹುಮಾನ ಪಡೆಯಲಿದೆ ಎಂದು ಜಿಲ್ಲಾ ಸಮನ್ವಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News