ಕನ್ನಡ ಅನ್ನದ ಭಾಷೆಯಾಗಿ ಉಳಿದಿಲ್ಲ: ಡಾ.ಜಯಪ್ಪ ಹೊನ್ನಾಳಿ ಮೈಸೂರು

Update: 2018-09-19 17:12 GMT

ಪುತ್ತೂರು, ಸೆ. 19: ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ 29ನೇ ಸ್ಥಾನದಲ್ಲಿರುವ, 5.50 ಕೋಟಿ ಜನರ ಮಾತೃಭಾಷೆಯಾದ ಕನ್ನಡ ಇಂದು ಅನ್ನದ ಭಾಷೆಯಾಗಿ ಉಳಿದಿಲ್ಲ. ವಿದೇಶಗಳಲ್ಲಿರುವ  ಕನ್ನಡಿಗರು ಹೆಚ್ಚು ಜಾಗೃತರಾಗಿದ್ದರೂ ಕನ್ನಡ ಭಾಷೆ ಬಳಕೆಯಲ್ಲಿ ಕನ್ನಡನೆಲದ ಬದುಕುತ್ತಿರುವ ನಮ್ಮ ಉದಾಸೀನ ಮನೋಭಾವದಿಂದಾಗಿ ಕನ್ನಡ ಇಂದು ಆತಂಕದ ಸ್ಥಿತಿಯಲ್ಲಿದೆ ಎಂದು ವಿಮರ್ಶಕ. ಕವಿ. ಡಾ.ಜಯಪ್ಪ ಹೊನ್ನಾಳಿ ಮೈಸೂರು ಅಭಿಪ್ರಾಯಪಟ್ಟರು.

ಅವರು ಪುತ್ತೂರು ಮಹಾಲಿಂಗೇಶ್ವರ ದೇವಳದ  ವಠಾರದಲ್ಲಿ ಬುಧವಾರ ಸಂಜೆ ಆರಂಭಗೊಂಡ ಪುತ್ತೂರು ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿದರು. 

ಕನ್ನಡ ಇಂದು ಕನ್ನಡಿಗರಿಂದಲೇ ಕೊಲೆಯಾಗುತ್ತಿದೆ. ಕನ್ನಡವನ್ನು ನಾವು ಬಳಸದೆ, ಮಾತನಾಡದೆ ಇದ್ದರೆ ವಿದೇಶದ ಕನ್ನಡಿಗರು ಮಾತ್ರ ಮಾತನಾಡಿ ಭಾಷೆಯನ್ನು ಬೆಳೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ. ವೆೃದ್ಯಕೀಯ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕಲಿಯುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಸಿಗುವಂತಾದರೆ ಮಾತ್ರ ಕನ್ನಡ ಅನ್ನದ ಭಾಷೆಯಾಗಲು ಸಾಧ್ಯ ಎಂದರು. 

ಯಾವುದೇ ಕಾರಣವಿಲ್ಲದೆ ಕನ್ನಡದ ಬಗ್ಗೆ ಪ್ರೀತಿ ಇಟ್ಟುಕೊಂಡು ಭಾಷೆಯನ್ನು ಬಳಕೆ ಮಾಡಿಕೊಳ್ಳುತ್ತಿರುವ ಗ್ರಾಮೀಣ ಭಾಗದ ಜನತೆ ಮತ್ತು ಕೂಲಿ ಕಾರ್ಮಿಕ ವರ್ಗದಿಂದ ಮಾತ್ರ ಇಂದು ಕನ್ನಡ ಜೀವಂತಿಕೆ ತುಂಬಿಕೊಂಡಿದೆ ಎಂದ ಅವರು ನಾವು ಕನ್ನಡವನ್ನು ನಮ್ಮದು ಎಂದು ಅಂದುಕೊಂಡರೆ ಯಾವತ್ತೂ ಕನ್ನಡ ಭಾರವಾಗುವುದಿಲ್ಲ. ಬದಲಾಗಿ ಕನ್ನಡಾಭಿಮಾನ ಬೆಳೆಯುತ್ತದೆ ಎಂದರು.

ಸೃಜನಶೀಲವಾಗಿ, ವೀರ್ಯವತ್ತಾಗಿ ಆಲೋಚನೆ ಮಾಡಿದರೆ ಮಾತ್ರ ಮಾತೃಭಾಷೆ ಬೆಳೆಯಲು ಸಾಧ್ಯ ಎಂದ ಅವರು ಕನ್ನಡದ ಕನ್ನಂಬಾಡಿಯನ್ನು ಕಟ್ಟುವ ಮತ್ತು ಕನ್ನಡದ ಬೆಳೆಯನ್ನು ವರ್ಷ ಪೂರ್ತಿ ಬೆಳೆಯುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.

ಮಕ್ಕಳು ಇಂದು ಉಸಿರಾಡುವ ಕಂಪ್ಯೂಟರ್ ಗಳಾಗುತ್ತಿರುವುದು ದೊಡ್ಡ ದುರಂತ. ವಾಸ್ತವತೆಗೆ ತದ್ವಿರುದ್ಧವಾಗಿ ಮನುಷ್ಯನ ಗುಣ ಗುಲಾಮನಾಗುತ್ತಿದ್ದು ಹಣ ಮಾಲಕನಾಗುತ್ತಿದೆ. ಕನ್ನಡತನದಿಂದ ದೂರವಾದ ಪರಿಣಾಮವಾಗಿಯೇ ಇಂತಹ ವೈಪರೀತ್ಯಗಳು ನಡೆಯುತ್ತಿದೆ ಎಂದರು. 

ಆಶಯ ಭಾಷಣ ಮಾಡಿದ ಜಿಲ್ಲಾ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ದಕ್ಷಿಣಕನ್ನಡ ಜಿಲ್ಲೆಯ ಜನತೆ ಕನ್ನಡ ಭಾಷಾಭಿಮಾನದಲ್ಲಿ ಹಿಂದುಳಿದಿಲ್ಲ. ಇಲ್ಲಿನ ಯಕ್ಷಗಾನ,ನಾಟಕಗಳಲ್ಲಿ ಶುದ್ಧ ಕನ್ನಡ ವಿಜೃಂಭಿಸುತ್ತಿದೆ. ಕನ್ನಡ ಉಳಿಕೆಗೆ ಸಕಾರಾತ್ಮಕ ಚಿಂತನೆ ಅಗತ್ಯ ಎಂದರು. 

ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳಾಧ್ಯಕ್ಷ ನಾ.ಕಾರಂತ ಪೆರಾಜೆ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಆಲ್ಫ್ರೆಡ್ ಜೆ.ಪಿಂಟೊ, ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಿಜಯ ಹಾರ್ವಿನ್,  ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಎಂ.ಪಿ. ಶ್ರೀನಾಥ್ ಉಜಿರೆ ಮತ್ತು ಬಿ.ತಮ್ಮಯ್ಯ. ಗೌರವ ಕೋಶಾಧ್ಯಕ್ಷೆ ಪೂರ್ಣಿಮಾ ಪೇಜಾವರ, ಮಂಗಳೂರು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷ ಬಿ.ಮೋಹನ್ ರಾವ್, ಪುತ್ತೂರು ತಾಲೂಕು ಘಟಕದ ಕೋಶಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ. ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ತಾಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ.ಶ್ರೀಧರ್ ಎಚ್.ಜಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News