ದೇರಳಕಟ್ಟೆಯಲ್ಲಿ 'ಕ್ಷೇಮದಲ್ಲಿ ಅಂಬಿಸಿಕಾನ್-2018' 5ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟನೆ

Update: 2018-09-19 18:22 GMT

ಕೊಣಾಜೆ, ಸೆ. 19: ಭಾರತದ ಜನಸಂಖ್ಯೆಗೆ ಅನುಗುಣವಾಗಿ 20 ಶೇ. ಜನರು ಮಧುಮೇಹಕ್ಕೆ ಒಳಗಾಗಿದ್ದಾರೆ. ಆ ಮೂಲಕ ಭಾರತ ಮಧುಮೇಹದ ರಾಜಧಾನಿಯಾಗುತ್ತಿದ್ದು ಮಧುಮೇಹದ ಕುರಿತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ವೈದ್ಯಕೀಯ ಜೀವ ರಸಾಯನ ಶಾಸ್ತ್ರ ವಿಭಾಗದ ಕರ್ನಾಟಕ ರಾಜ್ಯ ಘಟಕ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 5ನೇ ರಾಜ್ಯಮಟ್ಟದ ಆಂಬಿಸಿಕಾನ್-2018ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇಮದಲ್ಲಿರುವ ಜೀವ ರಸಾಯನಶಾಸ್ತ್ರ ಕೇಂದ್ರ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿದ್ದುಅಂತಹ ವ್ಯವಸ್ಥೆ ದೇಶದ ಕೆಲವೇ ಸಂಸ್ಥೆಗಳಲ್ಲಿದೆ. ಫಿಸಿಶಿಯನ್‍ಗಳು ಅದರ ಸದ್ಬಳಕೆ ಮಾಡಬೇಕಿದೆ. ಹಾಗೆಯೇ ಇತರ ಪ್ಯಾರಾಮೆಡಿಕಲ್ ವಿಭಾಗದವರು ಬಳಸಿಕೊಳ್ಳಬೇಕು. ಇತರ ಸಂಸ್ಥೆಗಳಿಗೂ ಆದರಿಂದ ಸೇವೆ ಕೊಡಲು ಸಾಧ್ಯವಿದೆ. ಆ ಮೂಲಕ ಮಧುಮೇಹದಂತಹ ರೋಗಕ್ಕೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ನುಡಿದರು.

ಸಮ್ಮೇಳನ ಪ್ರಯುಕ್ತ ಹೊರತರಲಾದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ ಹಿಂದಿನ ದಶಕದಲ್ಲಿ ಫಿಸಿಯೋಲಾಜಿ ಅಧ್ಯಯನ ಮಾಡುತ್ತಿರುವಾಗ ಜೀವ ರಸಾಯನ ಶಾಸ್ತ್ರ ಕೇವಲ ಒಂದು ಸಣ್ಣ ವಿಷಯವಾಗಿತ್ತು, ಅಷ್ಟೊಂದು ಪ್ರಾಶಸ್ತ್ಯ ಪಡೆದಿರಲಿಲ್ಲ. ಆದರೆ ಈಗಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದ ಪ್ರತಿರಂಗದಲ್ಲೂ ಜೀವರಸಾಯನ ಶಾಸ್ತ್ರ ಮಹತ್ವ ಪಡೆದಿದೆ. ಹಾಗೆಯೇ ಅತಿ 179 ನೋಬೆಲ್ ಪ್ರಶಸ್ತಿಯೂ ರಸಾಯನ ಶಾಸ್ತ್ರ ವಿಭಾಗಕ್ಕೆ ಸಂದಿದ್ದು ಜೀವ ರಸಾಯನ ಶಾಸ್ತ್ರಕ್ಕೂ ಮಹತ್ವ ಬಂದಿದೆ ಎಂದು ಹೇಳಿದರು.

ಈ ಶತಮಾನದ ಆರಂಭದಲ್ಲಿ ಸುಮಾರು 70 ಮಿಲಿಯನ್ ರೋಗಿಗಳು ಎರಡು ವಿಧದ ಮಧುಮೇಹಕ್ಕೆ ತುತ್ತಾಗಿದ್ದಾರೆ. ನಿರ್ಲಕ್ಷ್ಯ ತಾಳಿದರೆ 2030ಕ್ಕೆ ಅದು ದುಪ್ಪಟ್ಟಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ ಬಡತನ ಕಾಡಿದಂತೆ ಮಧುಮೇಹವೂ ಕಾಡ ತೊಡಗಿದೆ. ಒಬೆಸಿಟಿಗಾಗಿಯೇ ಅಮೇರಿಕಾದಲ್ಲಿವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್ ವ್ಯಯಿಸಲಾಗುತ್ತಿದೆ ಎಂದು ನುಡಿದರು.

ವೈದ್ಯಕೀಯ ಜೀವ ರಸಾಯನ ಶಾಸ್ತ್ರ ಸಂಘದ ಕರ್ನಾಟಕ ರಾಜ್ಯ ಘಟಕಾಧ್ಯಕ್ಷ ಡಾ. ಮಂಜುನಾಥ್ ಎಂ. ತೆಂಬಾಡ್ ಮಾತನಾಡಿ ಪ್ರಸ್ತುತ ಸಂಘದಲ್ಲಿ 353 ಸದಸ್ಯರಿದ್ದು, ಆಂಬಿಸಿಕಾನ್ ಅಡಿಯಲ್ಲಿ ಐದು ರಾಜ್ಯಮಟ್ಟದ ಸಮ್ಮೇಳನ, ಪ್ರಥಮ ವರ್ಷದ ಎಂಬಿಬಿಎಸ್‍ನ ವಿದ್ಯಾರ್ಥಿಗಳಿಗಾಗಿ ಮೂರು ರಾಜ್ಯ ಮಟ್ಟದ ಕ್ವಿಝ್ ಕಾಂಪಿಟೇಶನ್ ಹಾಗೂ ಹಲವು ಮುಂದುವರಿಕೆ ಶಿಕ್ಷಣ ಕಾರ್ಯಗಾರ ನಡೆಸಲಾಗಿದೆ ಎಂದು ನುಡಿದರು.

ಶಿವಮೊಗ್ಗ ಮೆಡಿಕಲ್ ಇನ್‍ಸ್ಟಿಟ್ಯೂಟ್‍ನ ಜೀವ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗುರುಪಾದಪ್ಪ, ಕೆಎಂಸಿ ಒಬ್ಸರ್ವರ್ ಡಾ. ನಾಗರಾಜಪ್ಪ, ಕ್ಷೇಮ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಹಾಗೂ ಡಾ. ಅಮೃತ್ ಮಿರಾಜ್ಕರ್ ಉಪಸ್ಥಿತರಿದ್ದರು.

ಆಂಬಿಸಿಕಾನ್-2018 ಚೇರ್‍ಮೆನ್ ಪ್ರೊ. ಡಾ. ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಕ್ಷೇಮ ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಆಂಬಿಸಿಕಾನ್-2018 ಸಮ್ಮೇಳನ ಸಂಘಟಕಿ ಪ್ರೊ. ಡಾ. ಸುಕನ್ಯಾ ಶೆಟ್ಟಿ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ. ಶ್ರೀನಿಧಿ ರೈ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News