ಮಹಿಳಾ ಟ್ವೆಂಟಿ-20: ಭಾರತಕ್ಕೆ ರೋಚಕ ಗೆಲುವು

Update: 2018-09-19 18:27 GMT

ಕತುನಾಯಕೆ(ಶ್ರೀಲಂಕಾ), ಸೆ.19: ಜೆಮಿಮಾ ರೊಡ್ರಿಗಸ್ ಹಾಗೂ ಪೂನಂ ಯಾದವ್ ಅವರ ವಿಶೇಷ ಪ್ರದರ್ಶನದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 13 ರನ್‌ಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಯುವ ಆಟಗಾರ್ತಿ ರೊಡ್ರಿಗಸ್ ಕೇವಲ 15 ಎಸೆತಗಳಲ್ಲಿ 36 ರನ್ ಗಳಿಸಿದರು. ರೋಡ್ರಿಗಸ್ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.

18ರ ಹರೆಯದ ರೊಡ್ರಿಗಸ್‌ಗೆ ವಿಕೆಟ್‌ಕೀಪರ್ ತಾನಿಯಾ ಭಾಟಿಯಾ(46,35 ಎಸೆತ) ಹಾಗೂ ಅನುಜಾ ಪಾಟೀಲ್(36,29 ಎಸೆತ) ಸಾಥ್ ನೀಡಿದ್ದು ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲು ನೆರವಾದರು. ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ಶ್ರೀಲಂಕಾಕ್ಕೆ ಯಶೋದಾ ಮೆಂಡಿಸ್(32 ರನ್,12 ಎಸೆತ)ಹಾಗೂ ಚಾಮರಿ ಅಟಪಟ್ಟು(27 ರನ್, 22 ಎಸೆತ)2.5 ಓವರ್‌ಗಳಲ್ಲಿ 39 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ಲೆಗ್ ಸ್ಪಿನ್ನರ್ ಪೂನಂ ಯಾದವ್ 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಶ್ರೀಲಂಕಾ ಕೈಯಿಂದ ಗೆಲುವನ್ನು ಕಸಿದುಕೊಂಡರು. 27ರ ಹರೆಯದ ಆಗ್ರಾ ಆಟಗಾರ್ತಿ ಪೂನಂ ಯಾದವ್ ದಾಳಿಗೆ ತತ್ತರಿಸಿದ ಶ್ರೀಲಂಕಾ 19.3 ಓವರ್‌ಗಳಲ್ಲಿ 155 ರನ್‌ಗೆ ಆಲೌಟಾಯಿತು.

ರಾಧಾ ಯಾದವ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಲಾ 2 ವಿಕೆಟ್‌ಗಳನ್ನು ಕಬಳಿಸಿ ಪೂನಂಗೆ ಉತ್ತಮ ಸಾಥ್ ನೀಡಿದರು. ಶ್ರೀಲಂಕಾದ ಪರ ಎಶಾನಿ ಲೋಕುಸೂರಿಯಗೆ 31 ಎಸೆತಗಳಲ್ಲಿ 45 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಎಶಾನಿ ಹೋರಾಟ ಫಲ ನೀಡಲಿಲ್ಲ. ಉಭಯ ತಂಡಗಳ ನಡುವೆ ಎರಡನೇ ಟ್ವೆಂಟಿ-20 ಪಂದ್ಯ ಶುಕ್ರವಾರ ಕೊಲಂಬೊದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News