ನಾನು ಸರಕಾರದೊಳಗೆಯೇ ಇದ್ದೇನೆ: ಸಚಿವ ಆರ್.ಶಂಕರ್

Update: 2018-09-20 14:19 GMT

ಉಡುಪಿ, ಸೆ.20: ನಾನು ಸ್ವತಂತ್ರ ಮತ್ತು ಪಕ್ಷೇತರ ಶಾಸಕನಾಗಿ ಸರಕಾರದ ಒಳಗೆ ಇದ್ದೇನೆ. ನನಗೆ ಪಕ್ಷ ಸೇರುವಂತೆ ಬಿಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಸ್ಪಷ್ಟನೆ ನೀಡಿದ್ದಾರೆ.
 
ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಹ್ಮಾವರದಲ್ಲಿ ನಡೆಯುವ ನನ್ನ ಆಪ್ತರ ಮದುವೆಗೆ ಬಂದಿದ್ದೇನೆ. ಈಗ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಉಂಟಾಗಿರುವ ಎಲ್ಲ ಗೊಂದಲಗಳು ಶೀಘ್ರವೇ ತಿಳಿಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಭಿನ್ನಮತೀಯ ಶಾಸಕರೊಂದಿಗೆ ಮುಂಬಯಿಗೆ ತೆರಳಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮುಂಬಯಿಗೆ ಹೋಗಿಲ್ಲ. ಯಾವುದೇ ಚಟುವಟಿಕೆಗಳನ್ನು ಮಾಡುತ್ತಿಲ್ಲ. ಸದ್ಯ ಕರಾವಳಿ ಪ್ರವಾಸದಲ್ಲಿದ್ದೇನೆ ಎಂದು ಅವರು ನುಡಿದರು.

ರಾಜ್ಯ ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಮಾಧ್ಯಮಗಳು ಸುಮ್ಮನೆ ಈ ವಿಚಾರವನ್ನು ಕೆದಕುತ್ತಿವೆ. ಸರಕಾರ ಸ್ಥಿರವಾಗಿ ಸರಿಯಾಗಿ ಮುಂದೆ ಸಾಗುತ್ತಿದೆ. ರಾಜ್ಯದ ಜನರ ಎಲ್ಲಾ ಕೆಲಸಗಳು ಆಗುತ್ತಿವೆ. ನನಗೆ ನೀಡಿರುವ ಖಾತೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಸಿರು ಕ್ರಾಂತಿಗೆ ಒತ್ತು: ರಾಜ್ಯವನ್ನು ಹಸಿರೀಕರಣ ಮಾಡಲು ನಾನು ಪಣ ತೊಟ್ಟಿದ್ದೇನೆ. ಹಸಿರು ಕ್ರಾಂತಿಗೆ ನಾನು ಒತ್ತು ನೀಡುತ್ತೇನೆ. ಇದಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಮೊಹರಂ ಸಂದರ್ಭದಲ್ಲಿ ಮರಗಳನ್ನು ಸುಡುವ ವಿಷಯ ಗೊತ್ತಿಲ್ಲ. ಇದು ಸರಿಯಲ್ಲ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ. ಕಾನೂನು ಮೀರಿ ವರ್ತಿಸಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಆರ್.ಶಂಕರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News