ರಾ.ಹೆದ್ದಾರಿಯ ಅವ್ಯವಸ್ಥೆ ವಿರುದ್ಧ ಆಕ್ರೋಶ: ಹೆಜಮಾಡಿ ಟೋಲ್‌ಗೇಟ್ ಬಳಿ ಪ್ರತಿಭಟನೆ

Update: 2018-09-20 07:50 GMT

ಪಡುಬಿದ್ರೆ, ಸೆ.20: ಸ್ಥಳೀಯರ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು, ರಾಷ್ಟ್ರೀಯ ಹೆದ್ದಾರಿ 66ರ ಬಾಕಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೆಜಮಾಡಿ ಟೋಲ್‌ಗೇಟ್ ಬಳಿ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ ಅಥವಾ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಸ್ಥಳೀಯ ವಾಹನಗಳಿಗೆ ಖಾಯಂ ಟೋಲ್ ವಿರಹಿತಗೊಳಿಸಬೇಕು. ಹೆದ್ದಾರಿ ಕಾಮಗಾರಿಯನ್ನು 2010ರ ಮೂಲ ನಕಾಶೆಯಂತೆ ನಿರ್ಮಿಸುವುದು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾನೂನು ಮೀರಿ 90 ಕಿಲೋ ಮೀಟರ್ ಅಂತರದಲ್ಲಿ ನಾಲ್ಕು ಟೋಲ್‌ಗೇಟ್ ನಿರ್ಮಿಸಿದ್ದು, ಸುರತ್ಕಲ್ ಟೋಲ್‌ನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿತು.

ರಾಷ್ಟ್ರೀಯ ಹೆದ್ದಾರಿ ತಿರುವುಗಳು ಅವೈಜ್ಞಾನಿಕವಾಗಿದ್ದು, ಅಪಘಾತ ವಲಯಗಳಲ್ಲಿ ಎಚ್ಚರಿಕೆ ನಾಮಫಲಕಗಳಿಲ್ಲ, ರಸ್ತೆ ವಿಭಜಕಗಳು ಅಸಮರ್ಪಕವಾಗಿವೆ. ಹೆದ್ದಾರಿ ಸಂಪರ್ಕ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡು ಸರ್ವೀಸ್ ರಸ್ತೆಗಳ ನಿರ್ಮಾಣವಾಗಿಲ್ಲ. ಕಳಪೆ ಮಟ್ಟದ ಬಸ್ ತಂಗುದಾಣಗಳನ್ನು ಬದಲಾಯಿಸಬೇಕು. ಹೆಜಮಾಡಿ ಒಳರಸ್ತೆಗೆ ಬೈಪಾಸ್ ನಿರ್ಮಾಣ ಮಾಡಬೇಕು. ಲೋಕೋಪಯೋಗಿ ರಸ್ತೆ ಟೋಲ್ ನಿಷೇಧಿಸುವಂತೆ ಒತ್ತಾಯಿಸಲಾಗುವುದು. ತಲಪಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ತೀರಾ ದುರಾವಸ್ಥೆಯಿಂದ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಮುಕ್ತಿ ನೀಡಬೇಕು ಇಲ್ಲವಾದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಹಾಗೂ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಕಾಪು ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಪಲಿಮಾರು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶಾಲಾಕ್ಷಿ ಪುತ್ರನ್, ದಮಯಂತಿ ಅಮೀನ್, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಅನ್ಸಾರ್ ಅಹ್ಮದ್, ಕಾಪು ಕ್ಷೇತ್ರಾಧ್ಯಕ್ಷ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಿವಾಕರ ಶೆಟ್ಟಿ ಕಾಪು, ಮಧು ಆಚಾರ್ಯ, ಅಬ್ದುಲ್ ಅಝೀಝ್, ಶೇಖರ್ ಹೆಜಮಾಡಿ, ಸುಧೀರ್ ಕರ್ಕೇರ, ಪಾಂಡುರಂಗ ಕರ್ಕೇರ ಪಡುಬಿದ್ರೆ ಕಾರು ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರವಿ ಶೆಟ್ಟಿ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ಅಬ್ಬಾಸ್ ಹಾಜಿ, ಇಸ್ಮಾಯೀಲ್ ಫಲಿಮಾರು, ಅಶ್ರಫ್, ಇಸ್ಮಾಯೀಲ್ ಹೆಜಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News