ಮರಳಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ಜಿಲ್ಲೆ ಬಂದ್: ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ

Update: 2018-09-20 12:06 GMT

ಉಡುಪಿ, ಸೆ.20: ಉಡುಪಿ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರಗೊಂಡಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಉಡುಪಿ ಜಿಲ್ಲೆ ಬಂದ್ ಮಾಡುವ ಮೂಲಕ ತೀವ್ರ ಹೋರಾಟ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು)ದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವ ದಲ್ಲಿ ಮರಳು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿರುವ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮರಳು ದಿಬ್ಬಗಳಿಂದ ಮರಳು ತೆಗೆಯಲು ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾನೂನು ಆಲೋಚನೆ ಮಾಡಿಕೊಂಡರೆ ಕಾರ್ಮಿಕರ ಹೊಟ್ಟೆ ತುಂಬುದಿಲ್ಲ. ಮರಳು ಇಲ್ಲದಿದ್ದರೆ ಕಟ್ಟಡ ಕಾರ್ಮಿಕರ ಬದುಕು ನಡೆಯುವುದಿಲ್ಲ. ಕಾರ್ಮಿಕರು ಕೇಳುತ್ತಿರುವುದು ಐಷರಾಮಿ ಬದುಕಲ್ಲ, ಹೊಟ್ಟೆಗೆ ಊಟ, ಮಕ್ಕಳಿಗೆ ಶಿಕ್ಷಣ, ಕುಟುಂಬದವರಿಗೆ ಆರೋಗ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆಗಳು: ಯುನಿಟ್‌ಗೆ 2,000 ರೂ. ದರದಲ್ಲಿ ಮರಳು ಸಿಗುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ನಾಡದೋಣಿಯವರಿಗೂ ಮರಳು ತೆಗೆಯಲು ಅವಕಾಶ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ತೆರವಾದ ಹುದ್ದೆ ಗಳನ್ನು ಕೂಡಲೇ ಭರ್ತಿ ಮಾಡಿ, ಸವಲತ್ತುಗಳ ತುರ್ತು ವಿಲೇವಾರಿ ಆಗಬೇಕು. ಪಿಂಚಣಿ 3,000 ರೂ.ಗೆ ಹೆಚ್ಚಿಸಬೇಕು. ನಿವೇಶನ ರಹಿತ ಕಟ್ಟಡ ಕಾರ್ಮಿಕರಿಗೆ ನಿವೇಶನ, ಮನೆ ಕಟ್ಟುವವರಿಗೆ ಮನೆ ಸಾಲ ಹಾಗೂ ಸಬ್ಸಿಡಿ ನೀಡಬೇಕು. 2017ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ಪಿಎಫ್ ಜಾರಿ ಮಾಡಬೇಕು. ಎಲ್ಲ ಕಟ್ಟಡ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ನೀಡಬೇಕೆಂದು ಧರಣಿ ನಿರತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಅಧ್ಯಕ್ಷ ಶೇಖರ ಬಂಗೇರ, ಗೌರವಾಧ್ಯಕ್ಷ ದಯಾನಂದ ಕೋಟ್ಯಾನ್, ಮುಖಂಡರಾದ ಸುರೇಶ್ ಕಲ್ಲಾಗರ್, ಕವಿರಾಜ್, ಕೆ.ಶಂಕರ್, ಗಣೇಶ್ ನಾಯ್ಕಾ, ರಾಮ ಕರ್ಕಡ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಮಣಿಪಾಲ ಟೈಗರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News