ಸುಂಕ ವಸೂಲಿ ಹೆಸರಲ್ಲಿ ಹಗಲು ದರೋಡೆ: ಕೋಟ ಶ್ರೀನಿವಾಸ ಪೂಜಾರಿ

Update: 2018-09-20 12:21 GMT

ಕುಂದಾಪುರ, ಸೆ.20: ರಾಷ್ಟ್ರೀಯ ಹೆದ್ದಾರಿಯ ಎಲ್ಲ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ದಾರಿದೀಪಗಳನ್ನು ಸಮಪರ್ಕಗೊಳಿಸಬೇಕು. ಕುಂದಾಪುರ ಮತ್ತು ಕರಾವಳಿ ಮೇಲ್ಸೇತುವೆ ಹಾಗೂ ಪಡುಬಿದ್ರೆ ಹೆದ್ದಾರಿ ಕಾಮಗಾರಿ ಯನ್ನು ಕೂಡಲೇ ಪೂರ್ಣಗೊಳಿಸಬೇಕು. ಇವು ಯಾವುದನ್ನು ಮಾಡದ ನವಯುಗ ಗುತ್ತಿಗೆ ಕಂಪೆನಿಯು ಜನರ ಮೇಲೆ ದಬ್ಬಾಳಿಕೆ ನಡೆಸಿ ಸುಂಕ ವಸೂಲಿ ಹೆಸರಲ್ಲಿ ಹಗಲು ದರೋಡೆ ಮಾಡುತ್ತಿದೆಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ, ಸರ್ವಿಸ್ ರಸ್ತೆ ನಿರ್ಮಾಣ, ಅಪಘಾತ ವಲಯಗಳಲ್ಲಿ ಸುರಕ್ಷತೆ ಹಾಗೂ ಸ್ಥಳೀಯ ನೋಂದಾಯಿತ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಾಸ್ತಾನ ಟೋಲ್ ಗೇಟ್ ಸಮೀಪ ಗುರುವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಒಂದಲ್ಲ ಒಂದು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ. ಜನರ ಸುರಕ್ಷತೆಗೆ ಪ್ರಾತಿನಿಧ್ಯ ನೀಡದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ನವಯುಗ ಗುತ್ತಿಗೆ ಕಂಪೆನಿಯ ಈ ಎಲ್ಲಾ ನಾಟಕಗಳನ್ನು ಜನ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಉಡುಪಿ ಜಿಲ್ಲಾ ಲಾರಿ ಮಾಲಕ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಉಡುಪಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಇದೇಯ ಅಥವಾ ಸತ್ತು ಹೋಗಿದೆಯೇ ಎಂಬುದು ಪ್ರಶ್ನೆಯಾಗಿದೆ. ಇಲ್ಲಿ ಪ್ರಜೆಗಳು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ವಿರುದ್ಧ ಕಳೆದ ಮೂರು ನಾಲ್ಕು ವರ್ಷಗಳ ಕಾಲ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ದೂರಿದರು.

ಧರಣಿಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ನ್ಯಾಯವಾದಿಗಳಾದ ಶ್ಯಾಮಸುಂದರ ನಾಯರಿ, ಬನ್ನಾಡಿ ಸೋಮನಾಥ ಹೆಗ್ಡೆ, ಜಿಪಂ ಸದಸ್ಯ ರಾಘವೇಂದ್ರ ಬಾರಿಕೆರೆ, ತಾಪಂ ಸದಸ್ಯೆ ಜ್ಯೋತಿ, ಜಯಕರ್ನಾಟಕ ಸಂಘಟನೆಯ ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸೆ.30ರೊಳಗೆ ಸಭೆ ಕರೆಯಲಿ

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಚರ್ಚಿಸಲು ಉಡುಪಿ ಜಿಲ್ಲಾಡಳಿತ ನಡೆಸುವ ಸಭೆಯಲ್ಲಿ ಒಪ್ಪಿಕೊಳ್ಳುವ ಹೆದ್ದಾರಿ ಪ್ರಾಧಿಕಾರದವರು ಇಲ್ಲಿ ಬಂದು ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಆದುದರಿಂದ ಜಿಲ್ಲಾಧಿಕಾರಿಗಳು ಸೆ.30ರೊಳಗೆ ಜಿಲ್ಲೆಯ ಎಲ್ಲ ಪ್ರಮುಖರ ಸಭೆ ಕರೆಯಬೇಕು. ಅದರ ನಂತರವೇ ಮುಂದಿನ ನಿರ್ಣಯಕೈಗೊಳ್ಳಬೇಕು. ಅಲ್ಲಿಯವರೆಗೆ ಟೋಲ್ ಗೇಟ್‍ಗಳಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಸೂಲಿ ಮಾಡಬಾರದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News