ತಿಂಗಳೊಳಗೆ ಮರಳು ಸಮಸ್ಯೆ ಇತ್ಯರ್ಥ: ದ.ಕ. ಜಿಲ್ಲಾಧಿಕಾರಿ

Update: 2018-09-20 13:19 GMT

ಮಂಗಳೂರು, ಸೆ.20: ಜಿಲ್ಲೆಯಲ್ಲಿ ಮರಳು ಅಭಾವ ಸಮಸ್ಯೆ ಒಂದು ತಿಂಗಳೊಳಗೆ ಬಗೆಹರಿಯಲಿದೆ. ಅಲ್ಲಿವರೆಗೆ ಸರ್ಕಾರಿ ಕೆಲಸಗಳಿಗೆ, ಆಶ್ರಯ ಮನೆ ಸೇರಿದಂತೆ ಸರಕಾರಿಪ್ರಾಯೋಜಿತ ಮನೆ ನಿರ್ಮಾಣ ಕಾಮಗಾರಿಗಳಿಗೆ ಮರಳು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಸಿಆರ್‌ಝಡ್ ರಹಿತ ವ್ಯಾಪ್ತಿಯಲ್ಲಿರುವ ಒಟ್ಟು 22 ಮರಳು ಬ್ಲಾಕ್‌ಗಳಿಗೆ ಇತ್ತೀಚೆಗೆ 3 ಬಾರಿ ಟೆಂಡರ್ ಆಗಿದ್ದರೂ ಕೇವಲ 2 ಬ್ಲಾಕ್‌ಗಳಲ್ಲಿ ಮಾತ್ರ ಮರಳು ಎತ್ತುವ ಕಾರ್ಯ ಆರಂಭಿಸಲಾಗಿದೆ. ಟೆಂಡರ್ ಗುತ್ತಿಗೆ ಪಡೆಯಲು ಇರುವ ಬಿಗಿ ನಿಯಮಗಳ ಕಾರಣದಿಂದ ಹೆಚ್ಚಿನ ಗುತ್ತಿಗೆದಾರರು ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ನಿಯಮ ಸಡಿಲಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಸರ್ವೇ ಕಾರ್ಯ ನಡೆಯುತ್ತಿದ್ದು, ಅದರ ವರದಿಗೆ ಕೆಸಿಝಡ್‌ಎಂಎ ಒಪ್ಪಿಗೆ ಸೂಚಿಸಿದ ತಕ್ಷಣ ಮರಳು ತೆಗೆಯುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯ ಕಾರಣ ತಿಳಿದುಕೊಳ್ಳಲು ಕೆಇಆರ್‌ಸಿ ಸಂಸ್ಥೆಯನ್ನು ಕೋರಲಾಗಿದ್ದು, 2-3 ದಿನಗಳಲ್ಲಿ ಅದರ ವರದಿ ಕೈಸೇರಲಿದೆ. ಅಲ್ಲಲ್ಲಿ ಕಟ್ಟಲಾದ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸಿಟ್ಟಿರುವುದು ನೀರಿನ ಮಟ್ಟ ಕಡಿಮೆಯಾಗಲು ಕಾರಣವಾಗಿರುವ ಸಾಧ್ಯತೆಯಿದೆ. ವರದಿ ದೊರೆತ ಬಳಿಕ ಖಚಿತ ಕಾರಣ ಗೊತ್ತಾಗಲಿದೆ. ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಇದು ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News