ಸರಕಾರದ ನಿಧಿಬಳಕೆಯ ಕಾಮಗಾರಿಗಳಿಗೆ ಸಂಸದ, ಶಾಸಕರ ಫೋಟೊ ಬಳಕೆ ಸರಿಯಲ್ಲ : ಭೋಜೇ ಗೌಡ

Update: 2018-09-20 13:58 GMT

ಮಂಗಳೂರು, ಸೆ.20: ಸರಕಾರದ ನಿಧಿಯ ಮೂಲಕ ನಡೆಯುವ ಕಾಮಗಾರಿಗಳಿಗೆ ಸಂಸದರ,ಶಾಸಕರ ಫೋಟೊ ಬಳಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಲ್.ಭೋಜೇ ಗೌಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಂಸದರ ನಿಧಿ, ಶಾಸಕರ ನಿಧಿ ಎನ್ನುವುದು ಸರಕಾರದ ಹಣ ಅದನ್ನು ಸಾರ್ವಜನಿಕ ಕೆಲಸಗಳಿಗೆ ವಿನಿಯೋಗಿಸಿದಾಗ ಅಲ್ಲಿ ವೈಯಕ್ತಿಕವಾಗಿ ಶಾಸಕರು, ಸಂಸದರು ತಮ್ಮ ಫೋಟೊ ಹಾಕುವುದರ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಂಸದರ ನಿಧಿ, ಶಾಸಕರ ನಿಧಿಯಿಂದ ಆಗಿರುವ ಕಾಮಗಾರಿ ಎಂದು ದಾಖಲಿಸುವುದು ತಪ್ಪಲ್ಲ. ಸಂಸದರು, ಶಾಸಕರು ತಮ್ಮ ಸ್ವಂತದ ಹಣವನ್ನು ಈ ರೀತಿಯಾಗಿ ಸಾರ್ವಜನಿಕ ಕೆಲಸಗಳಿಗೆ ವಿನಿಯೋಗಿಸಿ ಹೆಸರು ಫೋಟೊ ದಾಖಲಿಸಿದರೆ ನನ್ನ ಆಕ್ಷೇಪಣೆಯಿಲ್ಲ, ಆದರೆ ಸರಕಾರದ ಹಣವನ್ನು ವಿನಿಯೋಗಿಸಿ ನಡೆಸುವ ಕಾಮಗಾರಿಗಳಿಗೆ ತಮ್ಮ  ಫೋಟೊ ಹಾಕಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ಭೋಜೇ ಗೌಡ ತಿಳಿಸಿದ್ದಾರೆ.

ಈ ವಿಷಯವನ್ನು ಸರಕಾರದ ಶಾಸಕಾಂಗ ಸಭೆಯಲ್ಲಿ ಚರ್ಚಿಸುತ್ತೇನೆ ಅಗತ್ಯವೆನಿಸಿದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡುವುದಾಗಿ ಭೋಜೇ ಗೌಡ ತಿಳಿಸಿದ್ದಾರೆ.

ಮಂಗಳೂರಿಗೆ ಹೈಕೋರ್ಟ್ ನ ಸಂಚಾರಿ ನ್ಯಾಯಪೀಠ ಒದಗಿಸುವ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಭೋಜೇ ಗೌಡ ತಿಳಿಸಿದ್ದಾರೆ. ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ನ್ಯಾಯಾಲಯ ಉತ್ತಮವಾದ ನಿರ್ದೇಶನ ನೀಡಿದೆ. ಅದೇ ರೀತಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡುವ ಬಗ್ಗೆಯೂ ಇಂತಹ ಮಹತ್ವದ ತೀರ್ಮಾನ ತೆಗೆದುಕೊಂಡರೆ ಜನಸಾಮಾನ್ಯರಿಗೆ ತ್ವರಿತ ನ್ಯಾಯ ದೊರೆಯುತ್ತದೆ ಎಂದು ಭೋಜೇಗೌಡ ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಸಾಕಷ್ಟು ಲೋಪ ದೋಷಗಳು ಇರುವುದರಿಂದ ಅದು ಬದಲಾಗಬೇಕಾಗಿದೆ. ಅದೇ ರೀತಿ ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಐಎಎಸ್ ಅಧಿಕಾರಿಗಳು ಕಾಲ ಕಾಲಕ್ಕೆ ಹೊರಡಿಸುವ ಕೆಲವು ಸುತ್ತೋಲೆಗಳಿಂದ ಕೆಲವು ಪ್ರದೇಶಗಳ ಶಿಕ್ಷಕರು ತೊಂದರೆ ಅನಿಭವಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಬದಲಾವಣೆ ಮಾಡಲು ಅವಕಾಶ ನೀಡಬೇಕು ಇದರಿಂದ ಶಿಕ್ಷಕರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಭೋಜೇಗೌಡ ತಿಳಿಸಿದ್ದಾರೆ.

ಸರಕಾರಿ ಶಾಲೆಗಳನ್ನು ದೆಹಲಿಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಾಗಿದೆ. ರಾಜ್ಯದಲ್ಲಿ ಈ ರೀತಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಆಸಕ್ತಿ ವಹಿಸಿದ್ದಾರೆ ಎಂದು ಭೋಜೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಯುವ ಜೆಡಿಎಸ್ ವಿಭಾಗದ ಮುಖಂಡ ಅಕ್ಷಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News