ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಗೊಂದಲಗಳಿಗೆ ಪರಿಹಾರ ಏನು? : ಭಾಕಿಸಂ ಪ್ರಶ್ನೆ

Update: 2018-09-20 16:24 GMT

ಉಡುಪಿ, ಸೆ.20: ಗೋವಾ ಪೌಂಡೇಶನ್ ಹಾಗೂ ಕೇಂದ್ರ ಸರಕಾರದ ನಡುವಿನ ಅರ್ಜಿಗೆ ಸಂಬಂಧಿಸಿದಂತೆ ಆ.24ರಂದು ತೀರ್ಪು ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ಪ್ರಧಾನ ಪೀಠ, ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿರುವ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಹೊರಡಿಸಲಾದ ಕರಡು ಪ್ರಕಟಣೆಯನ್ನು ಆರು ತಿಂಗಳೊಳಗೆ ಮತ್ತೆ ಪ್ರಕಟಿಸಿ, ಅಂತಿಮಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಪ್ತಿ ಸತ್ಯನಾರಾಯಣ ಉಡುಪ ಹೇಳಿದ್ದಾರೆ.

ಭಾಕಿಸಂ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಎನ್‌ಜಿಟಿಯ ಈ ನಿರ್ದೇಶನದಿಂದ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ ಜನತೆ ಅನುಭವಿಸಬೇಕಾಗಿರುವ ಸಂಕಷ್ಟಗಳ ಕುರಿತು ಬೆಳಕು ಚೆಲ್ಲಿದರಲ್ಲದೇ, ವರದಿ ವಿಷಯದಲ್ಲಿ ಈ ವ್ಯಾಪ್ತಿಯ ಜನಪ್ರತಿನಿಧಿಗಳು ತೋರಿದ ನಿರಾಸಕ್ತಿಯನ್ನು ಟೀಕಿಸಿದರು.

2017ರ ಫೆ.27ರಂದು ಪ್ರಕಟಗೊಂಡ ಮೂರನೇ ಕರಡನ್ನು ಅಂತಿಮಗೊಳಿಸಲು ಇದ್ದ 18 ತಿಂಗಳ ಕಾಲಾವಕಾಶ 2018ರ ಆ.26ಕ್ಕೆ ಮುಕ್ತಾಯಗೊಂಡಿದ್ದು, ಈ ಕರಡನ್ನು ಮತ್ತೆ ಪ್ರಕಟಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು, 6 ತಿಂಗಳೊಳಗಾಗಿ ಅಂತಿಮಗೊಳಿಸಬೇಕೆಂದು ಎನ್‌ಜಿಟಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಆದೇಶ ನೀಡಿದೆ ಎಂದರು.

ಇದೇ ಸಂದರ್ಭದಲ್ಲಿ ಕೇರಳ ಹಾಗೂ ಮಡಿಕೇರಿಯಲ್ಲಿ ಈಚೆಗೆ ಸಂಭವಿಸಿದ ಪ್ರಾಕೃತಿಕ ಅನಾಹುತವನ್ನು ಗಮನದಲ್ಲಿರಿಸಿ, 2017ರ ಫೆ.27ರಂದು ಪ್ರಕಟಿಸಿದ ಕರಡು ಪ್ರಕಟಣೆಯಲ್ಲಿ ತಿಳಿಸಲಾದ ಪರಿಸರ ಸೂಕ್ಷ್ಮ ಪ್ರದೇಶದ (Ecologically Sensitive Area) ವಿಸ್ತೀರ್ಣದಲ್ಲಿ ಯಾವುದೇ ಕಡಿತವಾಗದಂತೆ ತೀರ್ಮಾನ ಕೈಗೊಳ್ಳಬೇಕೆಂದು ಆದೇಶಿಸಿದೆ. ಹಾಗೂ ಈ ಬೆಳವಣಿಗೆಗಳ ಬಗ್ಗೆ ಹಸಿರು ಪೀಠಕ್ಕೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ ಎಂದು ಉಡುಪ ವಿವರಿಸಿದರು.

ಅಲ್ಲದೇ ಈ ವರದಿ ಅನುಷ್ಠಾನವಾಗುವವರೆಗೂ ಪರಿಸರ ಸೂಕ್ಷ್ಮ ಪ್ರದೇಶ (ಇಎಲ್‌ಎ)ವೆಂದು ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾದ ಗ್ರಾಮಗಳಲ್ಲಿ ಪರಿಸರಕ್ಕೆ ಪ್ರತಿಕೂಲವಾಗಬಹುದಾದ ಯಾವುದೇ ಚಟುವಟಿಕೆಗಳಿಗೆ ಪರಿಸರ ಅನುಮತಿ ನೀಡದಂತೆಯೂ ಕೇಂದ್ರ ಸರಕಾರಕ್ಕೆ ಆದೇಶಿಸಿದೆ ಎಂದರು.

ಇನ್ನು ವಿನಾಯಿತಿ ಇಲ್ಲ: ಈ ತೀರ್ಪಿನ ಪರಿಣಾಮವಾಗಿ 2017ರ ಫೆ.27ರ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಸೂಚಿಸಲಾದ ಎಲ್ಲಾ ಗ್ರಾಮಗಳು ಅಂತಿಮ ಪ್ರಕಟಣೆಯಲ್ಲೂ ಮುಂದುವರೆಯುವುದು ಖಂಡಿತವಾಗಿದೆ. ಅಲ್ಲದೇ ಈ ಯಾವುದೇ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಕೈಬಿಡುವುದು ಇನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಸಾಧ್ಯವಾಗುವುದಿಲ್ಲ ಎಂದವರು ಅಭಿಪ್ರಾಯ ಪಟ್ಟರು.

ಕಳೆದ ವರ್ಷದ ಜುಲೈನಲ್ಲಿ ನೀಡಿದ ಆದೇಶದಲ್ಲಿ 12 ತಿಂಗಳೊಳಗೆ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅಂತಿಮಗೊಳಿಸಿ ಅನುಷ್ಠಾನಕ್ಕೆ ತರುವಂತೆ ಹಸಿರು ಪೀಠ ಆದೇಶಿಸಿದ್ದರೂ, ಈಗಿನ ಆದೇಶದಲ್ಲಿ ಕೆಲವು ತಡೆಯನ್ನೂ ಹಾಕಿದೆ. ಯಾವುದೇ ಅಭಿವೃದ್ಧಿ ಚಟುವಟಿಕೆಗೆ ಪಶ್ಚಿಮ ಘಟ್ಟದ ವ್ಯಾಪ್ತಿಯ ಆರು ರಾಜ್ಯಗಳಲ್ಲಿ ಪರಿಸರ ಅನುಮತಿ ನೀಡದಿರುವ ಸೂಚಿಸಿರುವ ಕಾರಣಕ್ಕೆ, ವರದಿಯನ್ನು ಆರು ತಿಂಗಳೊಳಗಾಗಿ ಅಂತಿಮಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಅನಿವಾರ್ಯವಾಗಲಿದೆ ಎಂದು ಉಡುಪ ತಿಳಿಸಿದರು.

ಪ್ರಯತ್ನಿಸಿದ್ದು ಕೇರಳ ಮಾತ್ರ: ಕೇರಳವನ್ನು ಹೊರತು ಪಡಿಸಿ ಉಳಿದ ಐದು ರಾಜ್ಯಗಳ ವ್ಯಾಪ್ತಿಯಲ್ಲಿ ಗುರುತಿಸಲಾದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕೈಬಿಡುವುದು ಅಥವಾ ಕಡಿತ ಮಾಡುವುದು ಇನ್ನು ಸಾಧ್ಯವಾಗದ ಮಾತು. ಇದರಿಂದಾಗಿ ಕರ್ನಾಟಕದ ಅತೀ ಹೆಚ್ಚು 20,668 ಚ.ಕಿ.ಮೀ., ಮಹಾರಾಷ್ಟ್ರದ 17,340 ಚ.ಕಿ.ಮೀ., ತಮಿಳುನಾಡಿನ 6,914 ಚ.ಕಿ.ಮೀ., ಗೋವಾದ 1,461 ಚ.ಕಿ.ಮೀ. ಹಾಗೂ ಗುಜರಾತಿನ 449 ಚ.ಕಿ.ಮೀ. ಪ್ರದೇಶಗಳು ಪರಿಸರ ಸೂಕ್ಷ್ಮಪ್ರದೇಶ(ಇಎಸ್‌ಎ)ವಾಗಿ ಘೋಷಣೆಗೊಳ್ಳುವುದು ಅನಿವಾರ್ಯವೆನಿಸಿದೆ.

ವರದಿಯ ಅನುಷ್ಠಾನ ವಿಚಾರದಲ್ಲಿ ಸಂಪೂರ್ಣ ಕಾಳಜಿವಹಿಸಿದ್ದ ಕೇರಳ ರಾಜ್ಯಲ್ಲಿ ಮಾತ್ರ ಸರಕಾರ ಭೌತಿಕ ಸಮೀಕ್ಷೆ ನಡೆಸಿ, ಸಕಾರಣಗಳೊಂದಿಗೆ ನಕ್ಷೆ ಸಹಿತ ವರದಿ ನೀಡಿದ ಕಾರಣ, 13,108 ಚ.ಕಿ.ಮೀ. ವಿಸ್ತೀರ್ಣದ ಅದರ ಇಎಸ್‌ಎ ಪ್ರದೇಶ ವ್ಯಾಪ್ತಿಯನ್ನು 9,993.7 ಚ.ಕಿ.ಮೀ.ಗೆ ಇಳಿಸಲಾಯಿತು. ಇದರಲ್ಲಿ 9,107 ಚ.ಕಿ.ಮೀ. ಸಂರಕ್ಷಿತ ಅರಣ್ಯವಾಗಿದ್ದು, ಕೇವಲ 886.7 ಚ.ಕಿ.ಮೀ ಮಾತ್ರ ಜನವಸತಿಯಲ್ಲದ ಕಂದಾಯ ಅರಣ್ಯ ಭೂಮಿಯಾಗಿದೆ.
ಆದರೆ ಕರ್ನಾಟಕ ಸೇರಿದಂತೆ ಉಳಿದೆಲ್ಲಾ ಐದು ರಾಜ್ಯಗಳ ಜನತೆ ಅಲ್ಲಿನ ಜನಪ್ರತಿನಿಧಿಗಳ ಬೊಗಳೆ ಮಾತುಗಳನ್ನು ನಂಬಿ ಮೋಸ ಹೋಗುವಂತಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಕೇರಳದ ಜನಪ್ರತಿನಿಧಿಗಳು ಒಗ್ಗಟ್ಟಾಗಿ ತೋರಿದ ಜನಪರ ಕಾಳಜಿಯನ್ನು ಕರ್ನಾಟಕದ ಜನಪ್ರತಿನಿಧಿಗಳು ತೋರದಿ ರುವುದರಿಂದ ಇಲ್ಲಿನ ಜನರೀಗ ಸಂಕಷ್ಟ ಅನುಭವಿಸುವಂತಾಗಿದೆ ಎಂದವರು ತಿಳಿಸಿದರು.

ಜನತೆ ಕತ್ತಲಲ್ಲಿ: ಈ ನಡುವೆ ರಾಜ್ಯದಲ್ಲಿ ಗುರುತಿಸಲಾದ 28 ವನ್ಯಜೀವಿ ಹಾಗೂ ಸಂರಕ್ಷಿತ ಅರಣ್ಯಗಳಲ್ಲಿ 20ಕ್ಕೂ ಹೆಚ್ಚನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ಎಂದು ಈಗಾಗಲೇ ಘೋಷಿಸಲಾಗಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮೂಕಾಂಬಿಕಾ ಅಭಯಾರಣ್ಯವನ್ನು ಇಎಸ್‌ಝಡ್ ಎಂದು 2017ರ ಎಪ್ರಿಲ್‌ನಲ್ಲೇ ಘೋಷಿಸಲಾಗಿದೆ. ಅದಕ್ಕೆ ತಾಗಿಕೊಂಡಂತೆ ಬೈಂದೂರಿನ ಹೊಸೂರಿನಿಂದ ಅಮಾಸೆಬೈಲಿನ ಮಚ್ಚಟ್ಟುವರೆಗಿನ 25 ಗ್ರಾಮಗಳ 12,478 ಹೆಕ್ಟೇರ್ ಪ್ರದೇಶವನ್ನು ಇಎಸ್‌ಝಡ್ ವ್ಯಾಪ್ತಿಗೆ ಸೇರಿಸಲಾಗಿದೆ ಎಂದವರು ಬಹಿರಂಗ ಪಡಿಸಿದರು.

ಹುಲಿ ಕಾರಿಡಾರ್: ಇದರೊಂದಿಗೆ ಇನ್ನೂ ಅಂತಿಮ ಪ್ರಕಟಣೆ ಹೊರಬೀಳದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾರ್ಕಳದ 10 ಗ್ರಾಮಗಳ 5,741.77ಹೆಕ್ಟೇರ್ ಪ್ರದೇಶ ಹಾಗೂ ಸೋಮೇಶ್ವರ ಅಭಯಾರಣ್ಯದ ಕರಡು ಪ್ರಕಟಣೆಯಲ್ಲಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಒಟ್ಟು 14 ಗ್ರಾಮಗಳ 2,672 ಹೆಕ್ಟೇರ್ ಪ್ರದೇಶಗಳನ್ನು ಇಎಸ್‌ಝಡ್ ವ್ಯಾಪ್ತಿಗೆ ಸೇರಿಸಲಾಗಿದೆ ಎಂದರು.

ಅಲ್ಲದೇ ಮೂಕಾಂಬಿಕಾ ಮತ್ತು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಘೋಷಿತ ‘ಹುಲಿ ಕಾರಿಡಾರ್’ ಇದ್ದು, ಇದು ಹಾದು ಹೋಗುವ ಜನವಸತಿ ಪ್ರದೇಶದ ಜನರನ್ನು ಒಕ್ಕಲೆಬ್ಬಿಸುವ ವಿಚಾರವನ್ನು ಸೂಚ್ಯವಾಗಿ ಹೇಳಲಾಗಿದೆ. ಆದರೆ ಈವರೆಗೆ ಕೇರಳ ರಾಜ್ಯದಲ್ಲಿರುವ ಯಾವುದೇ ವನ್ಯಜೀವಿ ಹಾಗೂ ಸಂರಕ್ಷಿತ ಅರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೆಷಿಸಲಾಗಿಲ್ಲ ಎಂದವರು ನುಡಿದರು.

ಇಎಸ್‌ಝಡ್ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ, ಕ್ರಷರ್,ಕೆಂಪು ವರ್ಗದಲ್ಲಿ ಗುರುತಿಸಲಾಗುವ ಕೈಗಾರಿಕೆ, ಚೌನ್‌ಶಿಪ್ ಹಾಗೂ ದೊಡ್ಡ ಕಟ್ಟಡಗಳಿಗೆ ಅವಕಾಶವಿರುವುದಿಲ್ಲ. ಕೆಲವೊಂದು ಚಟುವಟಿಕೆಗಳಿಗೆ ನಿಯಂತ್ರಿತವಾಗಿ ಸಮಿತಿಯ ಅನುಮತಿಯೊಂದಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸತ್ಯನಾರಾಯಣ ಉಡುಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಕಿಸಂನ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ರಾಮಚಂದ್ರ ಅಲ್ಸೆ, ಸದಾನಂದ ಶೆಟ್ಟಿ, ವಾಸುದೇವ ಶಾನುಭಾಗ್, ನವೀನಚಂದ್ರ ಜೈನ್, ಸುಂದರ ಶೆಟ್ಟಿ ಗೋವಿಂದರಾಜ್ ಭಟ್, ಸೀತಾರಾಮ ಗಾಣಿಗ, ಮಹಾಬಲ ನಾಯರಿ ಉಪಸ್ಥಿತರಿದ್ದರು.

ನಮ್ಮ ಸಂಸದ ಜನಪರ ಕಾಳಜಿ!
ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ ರಾಜ್ಯ ವಿನಾಯತಿಯನ್ನು ಪಡೆಯಲು ಕಾರಣ ಅಲ್ಲಿನ ಸಂಸದರು ಸೇರಿದಂತೆ ಜನಪ್ರತಿನಿಧಿಗಳು ರಾಜ್ಯದ ಒಳಗೆ ಮತ್ತು ಹೊರಗೆ ನಡೆಸಿದ ಅವಿತರ ಪ್ರಯತ್ನವೇ ಕಾರಣ ಎಂದು ಸತ್ಯನಾರಾಯಣ ಉಡುಪ ಜಪ್ತಿ ತಿಳಿಸಿದರು.

ವರದಿಯ ಕುರಿತು ಚರ್ಚಿಸಲು ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಸಚಿವರು 2016ರ ಆ.11ರಂದು ಕರೆದಿದ್ದ ಪಶ್ಚಿಮ ಘಟ್ಟ ಭಾಗದ ಸಂಸದರ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 16 ಸಂಸದರಲ್ಲಿ, ಕೇರಳ ರಾಜ್ಯದ 9 ಸಂಸದರು ಸೇರಿದ್ದರು. ಕರ್ನಾಟಕದ ಈ ಭಾಗದ 10ಕ್ಕೂ ಅಧಿಕ ಸಂಸದರಲ್ಲಿ ಭಾಗವಹಿಸಿದವರು ಮೂವರು ಮಾತ್ರ. ಅವರೆಂದರೆ ಆಸ್ಕರ್ ಪೆರ್ನಾಂಡಿಸ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತಕುಮಾರ ಹೆಗ್ಡೆ ಮಾತ್ರ ಎಂಬುದನ್ನು ಉಡುಪ ಬೊಟ್ಟು ಮಾಡಿದರು. ಇದು ನಮ್ಮ ಸಂಸದರ ಜನಪರ ಕಾಳಜಿಗೆ ನಿದರ್ಶನವಾಗಿದೆ ಎಂದವರು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News