ಸಾಹಿತ್ಯಕ್ಕೆ ಯಾವುದೇ ಜಾತಿ, ಧರ್ಮ, ಪಂಥದ ಕಟ್ಟುಪಾಡಿರಬಾರದು : ಡಾ. ಹರಿಕೃಷ್ಣ ಭರಣ್ಯ

Update: 2018-09-20 18:30 GMT

ಪುತ್ತೂರು,ಸೆ.20: ಜಾತಿ, ಧರ್ಮ, ಪಂಥದ ಕಟ್ಟುಪಾಡುಗಳ ಸಾಹಿತ್ಯಕ್ಕೆ ದೀರ್ಘಕಾಲದ ಬಾಳ್ವಿಕೆ ಮತ್ತು ಬೆಲೆಯಿಲ್ಲ. ಇಂತಹ  ಕಟ್ಟುಪಾಡು ಮೀರಿ ನಿಂತ ಸಾಹಿತ್ಯವೂ ಎಂದಿಗೂ ಶಾಶ್ವತವಾಗಿರುತ್ತದೆ. ಈ ನಿಟ್ಟಿನಲ್ಲಿ ಲೇಬಲ್ ಹಚ್ಚಿದ ಸಾಹಿತ್ಯಗಳು ಸರ್ವತೋಮುಖ ಬೆಳವಣಿಗೆಗೆ ಪೂರಕವಲ್ಲ ಎಂದು ಮಧುರೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ಹೇಳಿದರು.

ಅವರು ಗುರುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದ ಜಿ.ಎಲ್. ಆಚಾರ್ಯ ಸಭಾಂಗಣ ಹಾಗೂ ಎನ್.ವಿ. ಮೂರ್ತಿ ವೇದಿಕೆಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಇಂದು ಎಷ್ಟು ಮಂದಿ ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿಯ ಕುರಿತು ಪರಿಚಯವಿದೆ. ಅಲ್ಲದೆ ಅವರು ಕನ್ನಡ ಪುಸ್ತಕಗಳನ್ನು ಓದುವ ಮನೋಭಾವ ಬೆಳೆಸಿದ್ದಾರೆಯೇ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಮಕ್ಕಳಿಗೆ ಭಾಷೆ, ಸಾಹಿತ್ಯ, ಸಂಸ್ಕøತಿಯ ಕುರಿತು ಜಾಗೃತಿ ಮೂಡಿಸುವ ಕೆಲಸವಾದಾಗ ಮಾತ್ರ ಸಾಹಿತ್ಯ ಉಳಿಯಲು ಸಾಧ್ಯವಿದೆ ಎಂದರು.

ಅನುಭವ ಎನ್ನುವ ಸರಕನ್ನು ನಾವು ಬರವಣಿಗೆಯಲ್ಲಿ ಅಳವಡಿಸಿದರೆ ಸಾಹಿತ್ಯ ಜೀವಂತಿಕೆ ಪಡೆಯುತ್ತದೆ. ಮಕ್ಕಳಿಗೆ ಸಂಸ್ಕೃತಿ, ಸಾಹಿತ್ಯವನ್ನು ಓಡಿಸದಿದ್ದರೆ ಇಂಗ್ಲೀಷ್ ಭಾಷೆಯನ್ನು ಓದಿಯೂ ಪ್ರಯೋಜನವಿಲ್ಲ. ಎಷ್ಟು ಮಂದಿ ಕನ್ನಡ ಮಾಧ್ಯಮದ ಮೇಷ್ಟ್ರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ನಮ್ಮನ್ನು ನಾವೇ ಆತ್ಮವಿಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಆಂಗ್ಲ ಭಾಷೆ ಬೇಡವೆಂದಲ್ಲ. ನಮ್ಮ ತನವನ್ನು ಉಳಿಸದೆ ಆಂಗ್ಲ ಭಾಷೆಯನ್ನೇ ರಾರಾಜಿಸಿದರೆ ಕನ್ನಡ ಭಾಷೆ ಬೆಳವಣಿಯಾಗಲು ಸಾಧ್ಯವಿಲ್ಲ. ಇಂತಹ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಕನ್ನಡದ ಕುರಿತು ಮಕ್ಕಳಲ್ಲಿ ಪ್ರೇರೇಪಣೆಗೊಳಿಸುವ ಶಕ್ತಿಕೇಂದ್ರಗಳಾಗಬೇಕು ಎಂಬುದೇ ನನ್ನ ಉದ್ದೇಶ ಎಂದು ಡಾ. ಹರಿಕೃಷ್ಣ ಭರಣ್ಯ ಅಭಿಪ್ರಾಯಪಟ್ಟರು.

ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರ ತಂದ ವಿಕಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಪತ್ರಕರ್ತ ಟಿ.ಪಿ. ರಮೇಶ್, ಅಖಂಡ ಕರ್ನಾಟಕಕ್ಕಾಗಿ ಶ್ರಮಿಸಿದ ಹಿರಿಯ ಚೇತನಗಳ ಕುರಿತು ತಿಳಿಯುವುದು ಪ್ರಸ್ತುತ ಅಗತ್ಯವಾಗಿದ್ದು, ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ, ಕನ್ನಡಿಗರ ಸರಕಾರವಾಗಿ ಕೆಲಸ ಮಾಡಬೇಕು. ಇದರಿಂದ ಕನ್ನಡ ಭಾಷೆಯ ಅಸ್ತಿತ್ವ ಇನ್ನಷ್ಟು ಇಮ್ಮಡಿಗೊಳ್ಳಲು ಸಾಧ್ಯವಿದೆ. ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿದ್ದು, ಹಲವು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ವಾನ್ ಡಿ. ಶಂಕರ ಭಟ್(ಸಾಹಿತ್ಯ ಕೃಷಿ), ಅಪರಾಜಿತ್ ಜೈನ್(ನಾಟಕ, ಯಕ್ಷಗಾನ) ಕೃಷ್ಣರಾಜ ಕೆದಿಲಾಯ(ಸಾಹಿತ್ಯ, ಶಿಕ್ಷಣ), ರಾಮಮೋಹನ್ ರಾವ್(ಕಾನೂನು ಸಲಹೆ), ಕೆ. ಜಯಪ್ರಕಾಶ್ ರಾವ್(ಸಾಹಿತ್ಯ, ಸಾರ್ವಜನಿಕ ಸೇವೆ), ಎಂ.ಸಂಜೀವ ಶೆಟ್ಟಿ(ಉದ್ಯಮ), ಕಮ್ಮಾಡಿ ಇಬ್ರಾಹಿಂ ಹಾಜಿ(ಸಮಾಜ ಸೇವೆ), ದುಗ್ಗಮ ಕುಲಾಲ್ ಕೌಡಿಚ್ಚಾರ್(ಗುಡಿಕೈಗಾರಿಕೆ), ಸೇಸಪ್ಪ ಗೌಡ ರಾಮಕುಂಜ(ಕಾರ್ಗಿಲ್ ನಿವೃತ್ತ ಯೋಧ), ಡಾ.ಎಂ.ಎಸ್. ಭಟ್ ಮುದಲಾಜೆ(ಪಶುವೈದ್ಯಕೀಯ, ಹೈನುಗಾರಿಕೆ), ಪ್ರಸಾದ್ ಪಾಣಾಜೆ(ಯೋಗ ಶಿಕ್ಷಣ), ರಾಜರತ್ನ ದೇವಾಡಿಗ(ವಾದ್ಯ ಸಂಗೀತ), ಕಾವೇರಮ್ಮ ಮುಳಿಯ(ಸಮಾಜ ಸೇವೆ) ಮತ್ತು ಹೇಮಲತಾ ಗೋಕುಲ್‍ನಾಥ್(ಶಿಕ್ಷಣ) ಹಾಘೂ ಶ್ರೀ ರಾಮಕೃಷ್ಣ ಸೇವಾ ಸಮಾಜ ಮತ್ತು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಳಿಯ ಶ್ಯಾಮ ಭಟ್ ಅವರು ಸನ್ಮಾನ ಕಾರ್ಯ ನೆರವೇರಿಸಿದರು. 

ಈ ಸಂದರ್ಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿಯವರನ್ನು ಗೌರವಿಸಲಾಯಿತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಸಮ್ಮೇಳನದ ಉದ್ಘಾಟಕ ಡಾ. ಜಯಪ್ಪ ಹೊನ್ನಾಳಿ ಮೈಸೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ, ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಪಿ.ವಿ. ಗೋಕುಲ್ ನಾಥ್, ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್, ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ, ಸೇರಿದಂತೆ ಸಾಹಿತ್ಯ ಪರಿಷತ್ ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರೊ. ಎ.ವಿ. ನಾರಾಯಣ ಸ್ವಾಗತಿಸಿ, ಕಾರ್ಯದರ್ಶಿ ಹರಿಣಿ ಪುತ್ತೂರಾಯ ವಂದಿಸಿದರು. ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ಜಿ. ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News