ಮಣಿಪಾಲ: ‘ಗೋನಿಧಿ’ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Update: 2018-09-21 10:35 GMT

ಉಡುಪಿ, ಸೆ.21: ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ವತಿಯಿಂದ ಉಡುಪಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಕೊಡಗು ನೆರೆ ಸಂತ್ರಸ್ತರ ಪರಿ ಹಾರ ನಿಧಿಗಾಗಿ ಮಣಿಪಾಲ ಆರ್.ಎಸ್.ಬಿ.ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ‘ಗೋನಿಧಿ’ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರು ನಗರ ಪಾಲಿಕೆಯ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಿಂದ ಸೊತ್ತುಗಳನ್ನು ಕಳೆದುಕೊಂಡವರಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ವಿಚಾರದಲ್ಲಿ ಸರಕಾರದ ಜೊತೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು. ಮಕ್ಕಳ ಪ್ರತಿಭೆಯಿಂದ ಅನಾವರಣಗೊಂಡ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಕಲಾ ಕೃತಿಗಳನ್ನು ಮಾರಾಟ ಮಾಡಿ ಅದನ್ನು ನೆರೆ ಸಂತ್ರಸ್ತರಿಗೆ ನೀಡುವ ಮಕ್ಕಳ ಸಾಮಾಜಿಕ ಬದ್ಧತೆ ಮೆಚ್ಚುವಂತದ್ದು ಎಂದರು.

ಮುಖ್ಯ ಅತಿಥಿಗಳಾಗಿ ಮಾಧವ ಕೃಪಾ ಶಾಲೆಯ ಪ್ರಾಂಶುಪಾಲೆ ಜೆಸ್ಸಿ ಆ್ಯಂಡ್ರಿವ್ಸ್, ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಯು.ಸಿ.ನಿರಂಜನ್, ಹಿರಿಯ ಕಲಾವಿದ ಪಿ.ಎನ್.ಆಚಾರ್ಯ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಮಣಿಪಾಲ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶ್ರುತಿ ಶೆಣೈ ವಹಿಸಿದ್ದರು.

ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ವಿದ್ಯಾರ್ಥಿನಿ ಮೈಥಿಲಿ ಜಿ. ಸ್ವಾಗತಿಸಿದರು. ಹರಿತಾ ಅಲಪತಿ ವಂದಿಸಿದರು. ಸುಶ್ಮಾ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರದ ಕುಂದಾಪುರ ಮತ್ತು ಮಣಿಪಾಲದ 39 ವಿದ್ಯಾರ್ಥಿಗಳು ಅಕ್ರಾಲಿಕ್-ಕ್ಯಾನ್ವಾಸ್, ಜಲವರ್ಣ ಹ್ಯಾಂಡ್‌ಮೇಡ್ ಪೇಪರ್, ಚಾರ್ಕೋಲ್- ಐವರಿ ಪೇಪರ್ ಸೇರಿದಂತೆ ಮಿಶ್ರ ಮಾಧ್ಯಮದಲ್ಲಿ ರಚಿಸಿರುವ 39 ಗೋವಿನ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಸೆ.23ರವರೆಗೆ ಬೆಳಗ್ಗೆ 10ರಿಂದ ಸಂಜೆ 6:30ರ ತನಕ ನಡೆಯುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News