ಮಾನವ ಹಕ್ಕುಗಳ ಕಾರ್ಯಕರ್ತ ಡೇವಿಡ್ ಡಿಸೋಜಾ ಸಾವು ಪ್ರಕರಣ : ಪ್ರತಿಭಟನಾತ್ಮಕ ಹೋರಾಟಕ್ಕೆ ಪಿಯುಸಿಎಲ್ ನಿರ್ಧಾರ

Update: 2018-09-21 17:17 GMT

ಮಂಗಳೂರು, ಸೆ. 21: ಪಿಯುಸಿಎಲ್‌ನ ಜಿಲ್ಲಾಧ್ಯಕ್ಷರಾಗಿದ್ದ ಡೇವಿಡ್ ಡಿಸೋಜಾರವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿ ಮೂರು ವರ್ಷಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಬಗ್ಗೆ ನ್ಯಾಯಕ್ಕಾಗಿ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪಿಯುಸಿಎಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ. ಡೇಸಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೇವಿಡ್ ಡಿಸೋಜಾ ಸಾವಿನ ಪ್ರಕರಣದ ಕುರಿತು ಮಾಹಿತಿ ನೀಡಿದರು.

ಡೇವಿಡ್ ಡಿಸೋಜಾ ಅವರು 2015ರ ಜುಲೈ 6ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಟಾನಿ ಫೆರ್ನಾಂಡಿಸ್ ಎಂಬವರ ಪ್ರಕರಣವೊಂದಕ್ಕೆ ಸಂಬಂಧಿಸಿ ಸಹಾಯಕ್ಕೆ ತೆರಳಿದ್ದ ವೇಳೆ ಸಾವನ್ನಪ್ಪಿದ್ದರು. ಪ್ರಕರಣ ನಡೆದು 39 ತಿಂಗಳಾದರೂ ಪೊಲೀಸರು ಅಥವಾ ಸರಕಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪ್ರಕರಣದ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ಅವರು ದೂರಿದರು.

ಡೇವಿಡ್ ಡಿಸೋಜಾ ಸಾವಿನ ಬಗ್ಗೆ ಪೊಲೀಸ್ ಕಸ್ಟಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಠಾಣಾಧಿಕಾರಿಯಾಗಿದ್ದ ಪ್ರಮೋದ್ ಕುಮಾರ್ ಡೇವಿಡ್ ಜತೆ ಮಾತನಾಡುತ್ತಾ ಅವರ ಕೊಠಡಿಯಿಂದ ಮತ್ತೊಂದು ಕೊಠಡಿಗೆ ಕರೆದೊಯ್ದಿದ್ದರು. ಬಳಿಕ 10 ನಿಮಿಷಗಳಲ್ಲೇ ಡೇವಿಡ್‌ರ ದೇಹವನ್ನು ಎತ್ತಿಕೊಂಡು ವಾಹನಕ್ಕೆ ಹಾಕಲಾಗಿದೆ. ಡೇವಿಡ್ ಆ ಸಂದರ್ಭ ಪ್ರಜ್ಞಾಹೀನರಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರು ಮೃತಪಟ್ಟಿದ್ದರು. ಆರಂಭದಲ್ಲಿ ಎಸಿಪಿ ಮದನ್ ಗಾಂವ್ಕರ್‌ರನ್ನು ಪ್ರಕರಣದ ತನಿಖೆಗೆ ಪೊಲೀಸ್ ಆಯುಕ್ತರು ನೇಮಕಗೊಳಿಸಿದ್ದರು. ಇದನ್ನು ಪಿಯುಸಿಎಲ್ ಆಕ್ಷೇಪಿಸಿ, ಐಪಿಎಸ್ ಮಟ್ಟದ ಅಧಿಕಾರಿಯಿಂದ ಪ್ರಕರಣ ತನಿಖೆಗೆ ಆಗ್ರಹಿಸಿತ್ತು. ಬಳಿಕ ಆ ಸಂದರ್ಭ ಡಿಸಿಪಿ ಆಗಿದ್ದ ಸಂಜೀವ ಪಾಟೀಲ್ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದರು. ಆದರೆ ನಮಗೆ ಲಿಖಿತ ಉತ್ತರದಲ್ಲಿ ನಿಮ್ಮ ಕೋರಿಕೆಯ ಮೇರೆಗೆ ಪ್ರಕರಣ ಮುಚ್ಚಲಾಗಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಮತ್ತೆ ನಾವು ಆಕ್ಷೇಪ ಸಲ್ಲಿಸಿದ್ದೆವು. ಆಗಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಂಗಳೂರಿಗೆ ಬಂದ ಸಂದರ್ಭದಲ್ಲೂ ಮನವಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ಪ್ರಮುಖ ಸಾಕ್ಷಿ ಸ್ಟಾನಿ ಫೆರ್ನಾಂಡಿಸ್‌ರವರ ಹೇಳಿಕೆಯಿದ್ದರೂ ಯಾವುದೇ ಕ್ರಮ ಮಾತ್ರ ಆಗಿಲ್ಲ. ಮಾತ್ರವಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಯನ್ನು ಮಾಹಿತಿ ಹಕ್ಕಿನಡಿ ಕೇಳಲಾಗಿದ್ದರೂ ದೊರಕಿಲ್ಲ. ಆದ್ದರಿಂದ ಇದೀಗ ಪ್ರತಿಭಟನೆಯ ರೂಪದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗಿದೆ ಎಂದು ಪಿ.ಬಿ. ಡೇಸಾ ಹೇಳಿದರು.

'ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಭೀತಿಯ ವಾತಾವರಣ'
ಮಾನವ ಹಕ್ಕುಗಳ ಹೋರಟಗಾರರಾದ ಸುಧಾ ಭಾರದ್ವಜ್, ಗೌತಮ್ ನವ್ಲಕ, ಪ್ರೊ. ಆನಂದ ತೇಲ್‌ತುಂಬ್ಡೆ ಮೊದಲಾದವರನ್ನು ನಗರ ನಕ್ಸಲ್ಲರು ಎಂಬ ಹಣೆಪಟ್ಟಿ ನೀಡಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ. ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಭೀತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದ್ದು, ಪಿಯುಸಿಎಲ್ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವನ್ನು ಮಾಡಲಿದೆ ಎಂದು ಪಿ.ಬಿ. ಡೇಸಾ ಅಭಿಪ್ರಾಯಿಸಿದರು.

ಗೋಷ್ಠಿಯಲ್ಲಿ ಪಿಯುಸಿಎಲ್ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಅತ್ತಾವರ, ಸಲಹಾ ಸಮಿತಿಯ ಬಟ್ರಮ್ ಪಿಂಟೋ, ಹನೀಫ್ ಪಾಜಪಳ್ಳ, ಮೆಲ್ವಿನ್ ಪಿಂಟೋ, ಜೆರೊಮ್ ಸಲ್ಡಾನಾ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News