ಗೂಡಿನಬಳಿ ಬಾಲಕಿಯ ಅತ್ಯಾಚಾರ ಪ್ರಕರಣ: ಕೈಕಂಬದಲ್ಲಿ ಸಿಎಫ್‍ಐ, ಎನ್‍ಡಬ್ಲ್ಯುಎಫ್ ಪ್ರತಿಭಟನಾ ಸಭೆ

Update: 2018-09-21 12:26 GMT

ಬಂಟ್ವಾಳ, ಸೆ. 20: ತಾಲೂಕಿನ ಗೂಡಿನಬಳಿಯಲ್ಲಿ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಮತ್ತು ನ್ಯಾಷನಲ್ ವಿಮೆನ್ಸ್ ಫ್ರಂಟ್ ವತಿಯಿಂದ ಬಿ.ಸಿ.ರೋಡಿನ ಕೈಕಂಬದಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಯಿತು.

ಎನ್‍ಡಬ್ಲ್ಯೂಎಫ್ ಜಿಲ್ಲಾ ಸಮಿತಿ ಸದಸ್ಯೆ ಸುಮಯ್ಯಾ ಮಾತನಾಡಿ, ತಾಲೂಕಿನ ಗೂಡಿನಬಳಿಯಲ್ಲಿ ನಡೆದಂತಹ ಬಾಲಕಿಯ ಅತ್ಯಾಚಾರ ಪ್ರಕರಣವನ್ನು ಎನ್‍ಡಬ್ಲ್ಯೂಎಫ್ ತೀವ್ರವಾಗಿ ಖಂಡಿಸುತ್ತದೆ. ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಮರುಕಳಿಸುತ್ತಿದ್ದು, ಇದರಿಂದ ಮಹಿಳೆಯರಿಗೆ ರಕ್ಷಣೆಯಿಲ್ಲದೆ, ಮಾನ-ಪ್ರಾಣ ಭಯದಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಖೇದಕರ ಸಂಗತಿಯಾಗಿದೆ ಎಂದರು.

ಅತ್ಯಾಚಾರ ಆರೋಪಿಗಳಿಗೆ ಪೊಲೀಸರು ಸಣ್ಣಪುಟ್ಟ ಕೇಸುಗಳನ್ನು ದಾಖಲಿಸುವುದರಿಂದ ಆರೋಪಿಗಳು ಜಾಮೀನಿನ ಮೂಲಕ ಹೊರಬಂದು ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಬಾಲಕಿಗೆ ನ್ಯಾಯವನ್ನೊದಗಿಸಿ, ಪರಿಹಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು.

ಸಿಎಫ್‍ಐ ರಾಜ್ಯಾಧ್ಯಕ್ಷ ತಫ್ಸೀರ್ ಕೆ. ಅವರು ಪ್ರತಿಭಟನಕಾರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರವು ಅನಗತ್ಯ ಹಾಗೂ ವೈಯಕ್ತಿಕ ವಿಚಾರಗಳಿಗೆ ಕಡ್ಡಾಯ ಕಾನೂನು ಜಾರಿಗೊಳಿಸುವ ಬದಲು, ಮಹಿಳೆ ಹಾಗೂ ಮಕ್ಕಳ ರಕ್ಷಣೆಗಾಗಿ ಕಠಿಣವಾದ ಕಾನೂನು ಜಾರಿಗೊಳಿಸಲಿ ಎಂದು ಒತ್ತಾಯಿಸಿದರು. ಕೇಂದ್ರ ಸರಕಾರ ಶಾಲಾ ಕಾಲೇಜು ಹಾಗೂ ಮಹಿಳೆಯರಿಗಾಗಿ ಸ್ವ-ರಕ್ಷಣೆ ಮಾಡುವಂತಹ ಕಾರ್ಯಕ್ರಮ ಹಾಗೂ ಯೋಜನೆಯನ್ನು ರೂಪಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಸಿಎಫ್‍ಐ ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ್ದರು. 

ಪ್ರತಿಭಟನೆಯಲ್ಲಿ ಮುಖಂಡ ಹನೀಫ್ ಖಾನ್ ಕೊಡಾಜೆ, ಪುರಸಭಾ ಸದಸ್ಯ ಮುನೀಶ್ ಅಲಿ ಹಾಗೂ ಸಿಎಫ್‍ಐ ಉಪಾಧ್ಯಕ್ಷೆ ಮುರ್ಶಿದಾ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಇದ್ರೀಸ್ ಪಿ.ಜೆ., ಸಂಶಾದ್, ಝೀನತ್ ಫಿರೋಝ್, ಸಿಎಫ್‍ಐ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ, ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಝಿಯಾನ್, ಸಿಎಫ್‍ಐ ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ಉಪಸ್ಥಿತರಿದ್ದರು. ನಾಸಿರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News