ಕೇಂದ್ರ ಸರಕಾರ ಕ್ಯಾಂಪ್ಕೋಗೆ ನೀಡಿದ 161 ಕೋಟಿ ರೂ.ವನ್ನು ರೈತರಿಗೆ ಕೊಡಿಸುವ ಕೆಲಸ ಮಾಡಲಿ : ವೆಂಕಪ್ಪ ಗೌಡ

Update: 2018-09-21 12:59 GMT

ಸುಳ್ಯ,ಸೆ.21: ಸಂಸದ ನಳಿನ್ ಕುಮಾರ್ ಕಟೀಲ್‍ರವರು 2016-17 ರಲ್ಲಿ ಕೇಂದ್ರ ಸರಕಾರ ಕ್ಯಾಂಪ್ಕೋ ಸಂಸ್ಥೆಗೆ 161 ಕೋಟಿ ರೂ ನೀಡಿದೆ ಎಂದು ಹೇಳಿದ್ದಾರೆ. ಆದರೆ ಆ ಹಣ ಇದುವರೆಗೆ ರೈತರಿಗೆ ಸಿಕ್ಕಿಲ್ಲ. ಸಾಲಮನ್ನಾದ ಕುರಿತು ಪ್ರತಿಭಟನೆ ನಡೆಸುವ ಬಿಜೆಪಿಗರು ಮೊದಲು ಆ ಹಣವನ್ನು ರೈತರಿಗೆ ಕೊಡಿಸುವ ಕೆಲಸ ಮಾಡಿಲಿ. ಈ ವಿಚಾರದಲ್ಲಿ ಪ್ರತಿಭಟನೆ ನಡೆಸುವ ನೈತಕತೆ ಬಿಜೆಪಿಗಿಲ್ಲ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.

ಪತ್ರಿಕಾಗೋಷಿಯಲ್ಲಿ  ಮಾತನಾಡಿದ ಅವರು,ಕ್ಯಾಂಪ್ಕೋ ಸಂಸ್ಥೆಗೆ ಕೇಂದ್ರ ಹಣ ಬಿಡುಗಡೆ ಮಾಡಿದೆ ಎಂದು ಸಂಸದರೇ ಹೇಳಿಕೆ ನೀಡಿದ್ದಾರೆ. ಇದರಲ್ಲಿ 5 ಪೈಸೆ ಇದುವರೆಗೂ ರೈತನಿಗೆ ಸಿಕ್ಕಿಲ್ಲ. ಈ ಕುರಿತು ನಾವು ಮಾಹಿತಿ ಪಡೆಯಲು ಪ್ರಯತ್ನಿಸಿ, ಸಂಬಂಧಿಸಿದವರಿಗೆ ಪತ್ರ ಬರೆದರೂ ಇನ್ನೂ ಮಾಹಿತಿ ಸಿಕ್ಕಿಲ್ಲ. ಅದು ಏನಾಗಿದೆ ಎನ್ನುವುದನ್ನು ಬಿಜೆಪಿ ನಾಯಕರು ತಿಳಿಸಬೇಕು. ನಾವೂ ಈ ಕುರಿತು ಪತ್ತೆ ಪ್ರಯತ್ನ ನಡೆಸುತ್ತೇವೆ ಎಂದು ಅವರು ಹೇಳಿದರು. 

ಜೋಡುಪಾಲ ದುರಂತ ಸ್ಥಳಕ್ಕೆ ಕೇಂದ್ರ ಸಚಿವರಾದ ಸದಾನಂದ ಗೌಡರು ಬಂದು ಪರಿಶೀಲನೆ ನಡೆಸಿ ರಾಜ್ಯದಿಂದ ವರದಿ ಬಂದ ಮರುದಿನವೇ ಅನುದಾನ ನೀಡುವ ಭರವಸೆ ನೀಡಿದ್ದರು. ಇದೀಗ ರಾಜ್ಯದಿಂದ ವರದಿ ಹೋಗಿ ದಿನಗಳು ಉರುಳುತ್ತಿವೆಯಾದರೂ ಅನುದಾನ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ದೂರಿದರು. 

ಬೆಂಕಿಯ ಮಾತನಾಡಿದ್ದು ಬಿಜೆಪಿ: ಕೋಣಾಜೆ ಕಾರ್ತಿಕ್ ರಾಜ್ ಕೊಲೆ ಸಂದರ್ಭದಲ್ಲಿ ಜಿಲ್ಲೆಗೆ ಬಂಕಿ ಹಾಕುತ್ತೇವೆಂದು ಇಲ್ಲಿಯ ಸಂಸದ ನಳಿನ್‍ರವರು ಮಾತನಾಡಿದರೆ, ಬಿಸಿ ರೋಡ್‍ನ ಪ್ರತಿಭಟನೆಯ ಸಂದರ್ಭ ಯಡಿಯೂರಪ್ಪರವರು ರಾಜ್ಯಕ್ಕೆ ಬೆಂಕಿ ಹಾಕುವ ಹೇಳಿಕೆ ನೀಡುತ್ತಾರೆ. ಬಿಜೆಪಿ ವಿರುದ್ಧ ಮಾತನಾಡಿದರೆ ನಾಲಗೆ ಕತ್ತರಿಸುವ ಹೇಳಿಕೆ ಈಶ್ವರಪ್ಪರು ಹೇಳುತ್ತಾರೆ. ಸಚಿವರಾದ ಅನಂತ್ ಕುಮಾರ್ ಹೆಗ್ಡೆಯವರು ದೇಶದ ಇತಿಹಾಸಕಾರರ ವಿರುದ್ಧ ಹೇಳಿಕೆ ನೀಡುತ್ತಾರೆ. ಆದರೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು 'ದಂಗೆ ಏಳಬೇಕಾದೀತು ಎಂದು ಹೇಳಿರುವ ಹೇಳಿಕೆಯನ್ನು ವಿರೋಧಿಸುವ ಬಿಜೆಪಿಗರಿಗೆ ಅವರು ಈ ಹಿಂದೆ ಹೇಳಿರುವ ಹೇಳಿಕೆಗೆ ಏನು ಮಾಡಬೇಕು ಎಂದು ವೆಂಕಪ್ಪ ಗೌಡರು  ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೊ, ಕಾಂಗ್ರೆಸ್ ನಗರಾಧ್ಯಕ್ಷ  ದಿನೇಶ್ ಅಂಬೆಕಲ್ಲು, ಪ್ರಮುಖರಾದ ಆರ್.ಕೆ.ಮಹಮ್ಮದ್, ಸುರೇಶ್ ಅಮೈ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News