ಕಸಾಪದಿಂದ ಯಕ್ಷ ಸಾಹಿತ್ಯ ನಿರ್ಲಕ್ಷ : ಬಸವರಾಜ್ ಶೆಟ್ಟಿಗಾರ್

Update: 2018-09-21 13:54 GMT

ಕುಂದಾಪುರ, ಸೆ.21: ಹೇರಿಕುದ್ರು ಮಹಾಬಲ ವಿರಚಿತ 6ನೇಯ ವಿನೂತನ ಪ್ರಸಂಗ ‘ವರ್ಣ ನಿರ್ಯಾಣ’ ಕೃತಿಯನ್ನು ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ಇತ್ತೀಚೆಗೆ ಹೇರಿಕುದ್ರು ಗಣೇಶೋತ್ಸವದ ಸಂದರ್ಭದಲ್ಲಿ ಬಿಡುಗಡೆ ಗೊಳಿಸಿದರು.

ಬಳಿಕ ಮಾತನಾಡಿದ ಬಸವರಾಜ್ ಶೆಟ್ಟಿಗಾರ್, ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ, ನಾಟಕ, ಕಥೆ, ಕವನ ಇತ್ಯಾದಿಗಳನ್ನು ರಚಿಸಬಹುದು. ಆದರೆ ಯಕ್ಷಗಾನ ಸಾಹಿತ್ಯವನ್ನು ರಚಿಸುವುದು ಕ್ಲಿಷ್ಟಕರವಾಗಿರುತ್ತದೆ. ಆದಿಪ್ರಾಸ, ಅಂತ್ಯ ಪ್ರಾಸ, ರಾಗ, ತಾಳ, ಛಂದಸ್ಸುಗಳನ್ನೊಳಗೊಂಡರೆ ಮಾತ್ರ ಯಕ್ಷ ಸಾಹಿತ್ಯ ಎಂಬುದು ತನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಇಂತಹ ಯಕ್ಷ ಸಾಹಿತ್ಯ ವನ್ನು ಕನ್ನಡ ಸಾಹಿತ್ಯ ಪರಿಷತ್ತುಗಳು ಗುರುತಿಸದೇ ಇರುವುದು ವಿಷಾದನೀಯ ಎಂದರು.

ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣಪಯ್ಯ ಶೆಟ್ಟಿ, ಕೊರಗಯ್ಯ ಮಾಸ್ಟರ್, ಗಂಗಾಧರ ಶೆಟ್ಟಿ, ಬಾನುಕುದ್ರು ಕೊರಗಯ್ಯ ಮಾಸ್ಟರ್, ನಾರಾಯಣ ಶೆಟ್ಟಿ, ನಾರ್ಕಳಿ ಸುಧಾಕರ ಶೆಟ್ಟಿ, ಕೋಟ ಸಿಎ ಬ್ಯಾಂಕ್‌ನ ಅಧ್ಯಕ್ಷ ತಿಮ್ಮ ಪೂಜಾರಿ, ಮಾಜಿ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.

ಪ್ರಸಂಗಕರ್ತ ಹೇರಿಕುದ್ರು ಮಹಾಬಲರನ್ನು ಹಾಗೂ ಇತರ ಕಲಾವಿದರನ್ನು ಗೌರವಿಸಲಾಯಿತು. ಶಿಕ್ಷಕ ಹೇರಿಕುದ್ರು ಆನಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಹೇರಿಕುದ್ರು ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಪ್ರಥಮ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News