ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರಕಾರವೇ ಮುಂದಡಿ ಇಡಲಿ : ರೈತರ ಒಕ್ಕೊರಳ ನಿರ್ಣಯ

Update: 2018-09-21 15:23 GMT

ಬ್ರಹ್ಮಾವರ, ಸೆ.21: ಆರ್ಥಿಕ ಸಂಕಷ್ಟದ ಕಾರಣದಿಂದ 2004ರಿಂದ ಮುಚ್ಚಿರುವ ಕರಾವಳಿ ಭಾಗದ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರದ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರಕಾರ ಅಥವಾ ಆಡಳಿತ ಮಂಡಳಿ ಮುಂದಾದರೆ ತಾವು ಕಬ್ಬು ಬೆಳೆಯಲು ಸಿದ್ಧರಿದ್ದೇವೆ ಎಂದು ಶುಕ್ರವಾರ ಇಲ್ಲಿ ನಡೆದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ರೈತರು ಒಕ್ಕೊರಳ ನಿರ್ಣಯ ತಿಳಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್. ಜಯಶೀಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಖಾನೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು, ನಿರ್ದೇಶಕರು, ಸಹಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರೀ ಸಂಖ್ಯೆಯ ರೈತರು ಭಾಗವಹಿಸಿದ್ದರು.

ಕಾರ್ಖಾನೆಯ ಪುನಶ್ಚೇತನಕ್ಕೆ ಸರಕಾರ ಬೀಸು ಹೇಳಿಕೆ ನೀಡದೇ, ಈ ನಿಟ್ಟಿನಲ್ಲಿ ತಾನೇ ಮೊದಲ ದೃಢವಾದ ಹೆಜ್ಜೆಯನ್ನು ಮುಂದಿಟ್ಟು ರೈತರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ರೈತರು ಒತ್ತಾಯಿಸಿದರು. ಒಂದು ವೇಳೆ ಸರಕಾರದಿಂದ ನಿರೀಕ್ಷಿತ ಉತ್ತೇಜನ ಸಿಗದಿದ್ದರೆ, ಕಾರ್ಖಾನೆಯ ಬೈಲಾದಲ್ಲಿ ಆಡಳಿತ ಮಂಡಳಿಗೆ ನೀಡಿರುವ ಅಧಿಕಾರವನ್ನು ಬಳಸಿ, ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿದೆ ಎಂದು ತಜ್ಞರ ಸಮಿತಿಯೊಂದರ ವರದಿಯಲ್ಲಿ ತಿಳಿಸಿರುವಂತೆ 30 ಕೋಟಿ ರೂ.ಗಳಿಗಾಗುವಷ್ಟು ಕಾರ್ಖಾನೆಯ ಜಮೀನನ್ನು ಮಾರುವಂತೆ ರೈತರು ಒತ್ತಾಯಿಸಿದರು ಎಂದು ಜಯಶೀಲ ಶೆಟ್ಟಿ ‘ವಾರ್ತಾಭಾರತಿ’ಗೆ ತಿಳಿಸಿದರು.

ಆದರೆ ಕಾರ್ಖಾನೆಗೆ ಸೇರಿರುವ 110 ಎಕರೆ ಜಾಗದಲ್ಲಿ 30ಕೋಟಿ ರೂ.ಗೆ ಅಗತ್ಯವಿರುವ ಜಮೀನನ್ನು ಮಾರಲು (10ರಿಂದ 20 ಎಕರೆ), ಜಿಲ್ಲಾಧಿಕಾರಿ, ಶಾಸಕರು ಹಾಗೂ ಇತರ ಗಣ್ಯರು ಇರುವ ಸಮಿತಿಯೊಂದನ್ನು ರಚಿಸಿ ಅದು ಈ ಎಲ್ಲಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಿರ್ವಹಿಸಲಿ ಎಂದು ತಾನು ಸಭೆಯಲ್ಲಿ ಸಲಹೆ ನೀಡಿದೆ ಎಂದವರು ನುಡಿದರು.

ಅಲ್ಲದೇ ಇದಕ್ಕೆ ಮುನ್ನ, ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉಡುಪಿಗೆ ಬಂದಾಗ ಕಾರ್ಖಾನೆಯ ಪುನಶ್ಚೇತನಕ್ಕೆ ನೆರವಿನ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸರಕಾರದ ಬಳಿ ಕೊನೆಯ ಬಾರಿಗೆ ನಿಯೋಗವೊಂದನ್ನು ಒಯ್ದು ಮನವಿ ಮಾಡಿಕೊಳ್ಳುವ ಸಲಹೆಯನ್ನೂ ನೀಡಲಾಗಿದೆ. ಅಲ್ಲಿ ಪೂರಕ ಪ್ರತಿಕ್ರಿಯೆ ಬಾರದಿದ್ದರೆ ಮುಂದೆ ಆಡಳಿತ ಮಂಡಳಿ ತನ್ನ ಜಾಗ ಮಾರುವ ಬಗ್ಗೆ ಪರಿಶೀಲಿಸಬಹುದು ಎಂದು ಜಯಶೀಲ ಶೆಟ್ಟಿ ನುಡಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಸಾಧ್ಯತೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಆಡಳಿತ ಮಂಡಳಿ ಸಕ್ಕರೆ ಮತ್ತು ಕಬ್ಬು ಕ್ಷೇತ್ರದಲ್ಲಿ ತಜ್ಞವೆನಿಸಿದ ಪುಣೆಯ ಮಿಟ್ಕಾನ್ ಸಂಸ್ಥೆಯನ್ನು ನಿಯೋಜಿಸಿದ್ದು, ಅದು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ನೀಡಿದ ತಾಂತ್ರಿಕ ಮತ್ತು ಆರ್ಥಿಕ ಸಾಧ್ಯತಾ ವರದಿಯನ್ನು ಈಗಾಗಲೇ ಸರಕಾರಕ್ಕೆ ನೀಡಲಾಗಿದೆ. ಅದರಲ್ಲಿ ಕಾರ್ಖಾನೆಯ ಸಮಗ್ರ ಪುನಶ್ಚೇತನಕ್ಕೆ 30 ಕೋಟಿ ರೂ.ಗಳ ಅಗತ್ಯವಿದೆ ಎಂದು ತಿಳಿಸಲಾಗಿದೆ ಎಂದರು.

ವಾರಾಹಿ ನೀರಾವರಿ ಯೋಜನೆಯಲ್ಲಿ ಈಗ ಸುಮಾರು 14ರಿಂದ 15 ಸಾವಿರ ಎಕರೆ ಜಾಗಕ್ಕೆ ನೀರಿನ ಸೌಲಭ್ಯ ದೊರೆಯುತ್ತಿದೆ. ಅಲ್ಲದೇ ಎಡದಂಡೆ ಕಾಲುವೆಯಲ್ಲಿ ಸುಮಾರು 22 ಕಿ.ಮೀ. ಉದ್ದದ ಕಾಲುವೆ ರಚನೆಗೆ 350 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಗುತ್ತಿಗೆಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪೆನಿಗೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕಳೆದ ಅಧಿವೇಶದ ವೇಳೆ ವಿಧಾನಪರಿಷತ್‌ನಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ತಿಳಿಸಿದ್ದಾರೆ.

ಈ ಕಾಮಗಾರಿ ಶೀಘ್ರವಾಗಿ ನಡೆಯುವ ಭರವಸೆ ಇದ್ದು, ಇದರಿಂದ ಎಡದಂಡೆಯೊಂದರಲ್ಲೇ ಸುಮಾರು 20,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಲ್ಲಿ ಕೇವಲ 8000 ಎಕರೆ ಪ್ರದೇಶದಲ್ಲಿ ಕಬ್ಬನ್ನು ಬೆಳೆದರೆ ಸಕ್ಕರೆ ಕಾರ್ಖಾನೆಗೆ ಬೇಕಾದ 2.5 ಲಕ್ಷ ಟನ್ ಕಬ್ಬು ಧಾರಾಳವಾಗಿ ಸಿಗುತ್ತದೆ. ಹೀಗಾಗಿ ವಾರಾಹಿ ಯೋಜನೆಯ ನೀರು ಈಗ ವ್ಯರ್ಥವಾಗಿ ಸಮುದ್ರ ಸೇರುವುದರ ಸದ್ಭಳಕೆ ಮಾಡಲು ಸಹ ಸಾಧ್ಯವಾಗುತ್ತದೆ ಎಂದು ಸಭೆಗೆ ವಿವರಿಸಿದ್ದಾಗಿ ಜಯಶೀಲ ಶೆಟ್ಟಿ ನುಡಿದರು.

ಈಗಾಗಲೇ ಹೆಚ್ಚಿನ ರೈತರು ಸಕ್ಕರೆ ಕಾರ್ಖಾನೆ ಪುನರಾರಂಭಗೊಳ್ಳುವ ಬಗ್ಗೆ ವಿಶ್ವಾಸಾರ್ಹ ಹೆಜ್ಜೆ ಇಟ್ಟರೆ ತಾವು ಕಬ್ಬು ಬೆಳೆಯಲು ಸಿದ್ಧರಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಕ್ಕರೆ ಕಾರ್ಖಾನೆ ರೈತರಿಗಾಗಿ ಉಳಿಯ ಬೇಕು. ಆದುದರಿಂದ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂದು ರೈತರು ಒತ್ತಾಯಿಸಿದರು ಎಂದರು.

ಈ ಬಗ್ಗೆ ಚರ್ಚಿಸಲು 15ದಿನಗಳೊಳಗೆ ಮತ್ತೊಮ್ಮೆ ರೈತರ ಸಭೆಯನ್ನು ಕರೆಯುವುದಾಗಿ ಅವರು ತಿಳಿಸಿದರು. ಈ ನಡುವೆ ತಾನು ಮಂಡ್ಯಕ್ಕೆ ತೆರಳಿ ಕಬ್ಬಿನ ಬೀಜ ಹಾಗೂ ಇತರ ವಿಷಯಗಳ ಕುರಿತು ಅಲ್ಲಿನ ಕಬ್ಬು ಬೆಳೆಗಾರರಿಂದ ಮಾಹಿತಿ ಪಡೆಯುವುದಾಗಿ ಜಯಶೀಲ ಶೆಟ್ಟಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News