ಭಾರತದ ಗೆಲುವಿಗೆ 174 ರನ್‌ಗಳ ಗುರಿ

Update: 2018-09-21 15:28 GMT

ದುಬೈ, ಸೆ.21: ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್‌ನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೈ ಸುಟ್ಟುಕೊಂಡಿದ್ದ ಬಾಂಗ್ಲಾದೇಶ ತಂಡ ಸೂಪರ್ -4 ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸಾಧಾರಣ ಮೊತ್ತ ದಾಖಲಿಸಿದೆ.

  ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ತಂಡ 49.1 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲೌಟಾಗಿದೆ. ಮೆಹಿದಿ ಹಸನ್ ದಾಖಲಿಸಿದ 42 ರನ್‌ಗಳ ಸಹಾಯದಿಂದ ಬಾಂಗ್ಲಾದ ಸ್ಕೋರ್ 170ರ ಗಡಿ ದಾಟಿತು.

ಹಸನ್ ಮತ್ತು ನಾಯಕ ಮಶ್ರಾಫೆ ಮೊರ್ತಾಜೆ 8ನೇ ವಿಕೆಟ್‌ಗೆ ಜೊತೆಯಾಟದಲ್ಲಿ ತಂಡದ ಖಾತೆಗೆ 66 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

 ಆರಂಭಿಕ ದಾಂಡಿಗರಾದ ಲಿಟನ್ ದಾಸ್ (7) ಮತ್ತು ನಝ್ಮುಲ್ ಹುಸೈನ್ ಶಾಂಟೊ (7) ಅವರನ್ನು ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಬೇಗನೆ ಪೆವಿಲಿಯನ್‌ಗೆ ಅಟ್ಟಿದರು. 5.1 ಓವರ್‌ಗಳಲ್ಲಿ 16ಕ್ಕೆ 2 ವಿಕೆಟ್ ಕಳೆದುಕೊಂಡ ಬಾಂಗ್ಲಾ ಪರ ಶಾಕಿಬ್ ಅಲ್ ಹಸನ್(17) ಮತ್ತು ವಿಕೆಟ್ ಕೀಪರ್ ಮುಶ್ಫೀಕುರ್ರಹೀಂ (21) ಎರಡಂಕೆಯ ಕೊಡುಗೆ ನೀಡಿ ಜಡೇಜಗೆ ವಿಕೆಟ್ ಒಪ್ಪಿಸಿದರು. ಮುಹಮ್ಮದ್ ಮಿಥುನ್(9) ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 18 ಓವರ್‌ಗಳಲ್ಲಿ 65ಕ್ಕೆ 5 ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದ ಮಹ್ಮುದುಲ್ಲಾ (25)ಮತ್ತು ಮೊಸಾಡೆಕ್ ಹುಸೈನ್ (12) ಅವರು 6ನೇ ವಿಕೆಟ್‌ಗೆ 36 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ಬಾಂಗ್ಲಾದ ಸ್ಕೋರ್ 32.4 ಓವರ್‌ಗಳಲ್ಲಿ 101ಕ್ಕೆ ತಲುಪಿತು. ್ಲ 32.5ನೇ ಓವರ್‌ನಲ್ಲಿ ಮಹ್ಮುದುಲ್ಲಾರನ್ನು ಭುವನೇಶ್ವರ ಕುಮಾರ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಮಹ್ಮುದುಲ್ಲಾ ನಿರ್ಗಮಿಸಿದ ಬೆನ್ನಲ್ಲೇ ಮೊಸಾದೆಕ್ ಅವರು ಜಡೇಜ ಎಸೆತದಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿದರು.

ಎಂಟನೇ ವಿಕೆಟ್‌ಗೆ ಮೆಹಿದಿ ಹಸನ್ ಮತ್ತು ಮೊರ್ತಾಝಾ 66 ರನ್‌ಗಳ ಜೊತೆಯಾಟ ನೀಡಿದರು. ಹಸನ್ 42 ರನ್ (50ಎ, 2ಬೌ,2ಸಿ) ಗಳಿಸಿ ಬುಮ್ರಾ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮೊರ್ತಾಝಾ 26 ರನ್ ಗಳಿಸಿ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮುಸ್ತಾಫಿಝ್ರುರಹ್ಮಾನ್(3) ಅವರು ಬುಮ್ರಾಗೆ ಕ್ಯಾಚ್ ನೀಡುವುದರೊಂದಿಗೆ ಬಾಂಗ್ಲಾ ತಂಡ ದ ಇನಿಂಗ್ಸ್ ಮುಕ್ತಾಯಗೊಂಡಿತು. ಭಾರತದ ಪರ ರವೀಂದ್ರ ಜಡೇಜ 29ಕ್ಕೆ 4, ಭುವನೇಶ್ವರ ಕುಮಾರ್ 32ಕ್ಕೆ 3 ಮತ್ತು ಜಸ್‌ಪ್ರೀತ್ ಬುಮ್ರಾ 37ಕ್ಕೆ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News